Sidlaghatta : ಶಿಡ್ಲಘಟ್ಟ ನಗರಭೆಯ (City Municipal council CMC) ವ್ಯಾಪ್ತಿಯಲ್ಲಿ ಮನೆ ಕಂದಾಯ ಮತ್ತು ನೀರು ಕಂದಾಯ ಸಹಿತ ಆಸ್ತಿ ತೆರಿಗೆಯನ್ನು (Property Tax) ಪಾವತಿಸಿ ನಗರಾಭಿವೃದ್ದಿಗೆ ಸಹಕರಿಸಬೇಕೆಂದು ಪೌರಾಯುಕ್ತ ಆರ್.ಶ್ರೀಕಾಂತ್ ಮನವಿ ಮಾಡಿದ್ದಾರೆ.
ನಗರಸಭೆಯ ವ್ಯಾಪ್ತಿಯಲ್ಲಿ ತೆರಿಗೆ ವಸೂಲಿ ಅಭಿಯಾನದಲ್ಲಿ ಭಾಗವಹಿಸಿ ನಂತರ ಭೇಟಿಯಾದ ಸುಧ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಮನೆಗಳ ಕಂದಾಯ ನೀರು ಕಂದಾಯ ಸಹಿತ ಆಸ್ತಿ ತೆರಿಗೆಯನ್ನು ಕೆಲವರು ಬಾಕಿ ಉಳಿಸಿಕೊಂಡಿದ್ದು ಈಗಾಗಲೇ ನಗರಸಭೆಯ ಮೂಲಕ ಪ್ರತಿಯೊಂದು ವಾರ್ಡ್‍ನಲ್ಲಿ ತೆರಿಗೆ ವಸೂಲಿ ಮಾಡುವ ಅಭಿಯಾನವನ್ನು ನಡೆಸಲಾಗುತ್ತಿದೆ. ನಾಗರಿಕರು ಸಹ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಇನ್ನೂ ಹಲವರು ತೆರಿಗೆಯನ್ನು ಬಾಕಿ ಉಳಿಸಕೊಂಡಿದ್ದು ಅದನ್ನು ಕೂಡಲೇ ಪಾವತಿಸಿ ನಗರದಲ್ಲಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ದಿಗೊಳಿಸಲು ಸಹಕರಿಸಬೇಕೆಂದು ವಿನಂತಿಸಿದರು.
ರೇಷ್ಮೆ ನಗರವನ್ನು ಸ್ಥಳೀಯ ಶಾಸಕರು, ನಗರಸಭೆಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರ ಮತ್ತು ನಾಗರಿಕರ ಸಹಕಾರದಿಂದ ಮಾದರಿಯಾಗಿ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ನಗರವನ್ನು ಸ್ವಚ್ಚ ಹಾಗೂ ಸುಂದರವಾಗಿಡಲು ಪೌರಕಾರ್ಮಿಕರು ಪ್ರಯತ್ನ ಮಾಡುತ್ತಿದ್ದರೂ ಸಹ ನಾಗರಿಕರು ಹಲವೆಡೆ ಎಲ್ಲಂದರಲ್ಲೇ ಕಸವನ್ನು ಸುರಿದು ಅನೈರ್ಮಲ್ಯ ಉಂಟು ಮಾಡುತ್ತಿದ್ದಾರೆ. ನಾಗರಿಕರು ಮನೆಯಲ್ಲಿ ಒಣ ಮತ್ತು ಹಸಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡುವ ಮೂಲಕ ರೇಷ್ಮೆ ನಗರವನ್ನು ಸ್ವಚ್ಚ ಹಾಗೂ ಸುಂದರವಾಗಿಡಲು ಸಹಕರಿಸಬೇಕೆಂದು ಪೌರಾಯುಕ್ತ ಶ್ರೀಕಾಂತ್ ಮನವಿ ಮಾಡಿದ್ದಾರೆ.