ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮದಲ್ಲಿ ಮಂಗಳವಾರ ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರ ಮತ್ತು ರೇಷ್ಮೆ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಹಿಪ್ಪುನೇರಳೆಯಲ್ಲಿ ಎಲೆ ಸುರುಳಿ ಕೀಟದ ಸಮಗ್ರ ನಿರ್ವಹಣೆ ಕುರಿತು ಹೊರಾಂಗಣ ತರಬೇತಿ ಕಾರ್ಯಕ್ರಮದಲ್ಲಿ ಬೇವಿನ ಎಣ್ಣೆ ಹಾಗೂ ಟ್ರೈಕೋಗ್ರಾಮಾ ಕಣಜದ ಬಳಕೆಯ ಪದ್ಧತಿ ಪ್ರಾತ್ಯಕ್ಷಿಕೆಯ ಮೂಲಕ ರೇಷ್ಮೆಕೃಷಿ ವಿಜ್ಞಾನಿ ಡಾ.ವಿನೋದಾ ವಿವರಿಸಿದರು.
ಹಿಪ್ಪುನೇರಳೆ ಸೊಪ್ಪು ಬೆಳೆಗೆ ತಗುಲುವ ಕೀಟ ಬಾಧೆ ತಡೆಗಾಗಿ ರೈತರು ಭೌತಿಕ, ಜೈವಿಕ ಮತ್ತು ರಾಸಾಯನಿಕ ನಿಯಂತ್ರಣಾ ಕ್ರಮಗಳನ್ನು ಅನುಸರಿಸಬೇಕು. ಎಲೆಸುರುಳಿ ಕೀಟಬಾದೆಯನ್ನು ಸಮಗ್ರವಾಗಿ ನಿರ್ವಹಣೆ ಮಾಡಲು ಸೊಪ್ಪು ಕಟಾವಾದ 15 ದಿನಗಳ ನಂತರ ಶೇ 1 ರ ಬೇವಿನ ಎಣ್ಣೆಯ ದ್ರಾವಣ ಅಥವಾ ಕ್ಲೋರ್‌ಫೆನಾಪೈರ್ ಕೀಟನಾಶಕ (ಪ್ರತಿ ಲೀಟರ್ ನೀರಿಗೆ 1.5 ಮಿ.ಲೀ) ದ್ರಾವಣವನ್ನು ಸಿಂಪರಣೆ ಮಾಡಿದ ಮೂರು ದಿನಗಳ ನಂತರ ಟ್ರೈಕೋಗ್ರಾಮ ಕಿಲೋನಿಸ್ ಕಣಜದ ಕಾರ್ಡ್‌ನ್ನು ವಾರಕ್ಕೊಮ್ಮೆ ಪ್ರತಿ ಎಕರೆಗೆ ಒಂದರಂತೆ ನಾಲ್ಕು ವಾರಗಳ ಕಾಲ ಕಟ್ಟಬೇಕು. ಕಾರ್ಡ್‌ನಿಂದ ಹೊರಬರುವ ಕಣಜಗಳು ಎಲೆ ಸುರುಳಿ ಕೀಟದ ಮೊಟ್ಟೆಯೊಳಗೆ ತನ್ನ ಮೊಟ್ಟೆಯಿಟ್ಟು ಸಾಯಿಸುವುದರಿಂದ ಮರಿಹುಳುಗಳು ಹೊರಬಾರದಂತೆ ತಡೆಯುತ್ತವೆ. ಕಾರ್ಡ್ ಕಟ್ಟಿದ ನಂತರ ತೋಟಕ್ಕೆ ಯಾವುದೇ ರಾಸಾಯನಿಕ ಬಳಸುವುದು ಸೂಕ್ತವಲ್ಲ. ಇದರಿಂದ ಪರಿಸರದಲ್ಲಿ ಟ್ರೈಕೋಗ್ರಾಮದಂತಹ ಪರಾವಲಂಬಿ ಕಣಜಗಳ ಸಂಖ್ಯೆ ವೃದ್ಧಿಸಿ ಕೀಟಪೀಡೆಯನ್ನು ಹತೋಟಿಯಲ್ಲಿಡುವುದರೊಂದಿಗೆ ಪರಿಸರ ಸಂರಕ್ಷಣೆಗೂ ಸಹಕಾರಿ. ಅಷ್ಟೇ ಅಲ್ಲದೆ ಅತಿಯಾದ ಕೀಟನಾಶಕದ ಬಳಕೆಯಿಂದ ರೇಷ್ಮೆಹುಳುಗಳ ಆಗಬಹುದಾದ ಹಾನಿಯನ್ನೂ ತಡೆಯುತ್ತದೆಂದು ತಿಳಿಸಿದರು.
ರೇಷ್ಮೆ ಉಪನಿರ್ದೇಶಕ ಆಂಜನೇಯ ಗೌಡ ಮಾತನಾಡಿ, ರೈತರಿಗೆ ಹಿಪ್ಪುನೇರಳೆಯನ್ನು ಸೆಪ್ಟೆಂಬರ್‌ನಿಂದ ಫೆಬ್ರವರಿ ತಿಂಗಳವರೆಗೆ ಹೆಚ್ಚಾಗಿ ಕಾಡುವ ಎಲೆ ಸುರುಳಿ ಕೀಟ ನಿರ್ವಹಣೆಗೆ ಸಮಗ್ರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸೂಕ್ತವೆಂದು ಸೂಚಿಸಿದರು.
ಕೃಷಿವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಂ.ಪಾಪಿರೆಡ್ಡಿ ಮಾತನಾಡಿ, ಹಿಪ್ಪುನೇರಳೆ ಗುಣಮಟ್ಟ ಸುಧಾರಿಸಲು ಕೀಟ ಹಾಗೂ ರೋಗಗಳ ಬಾದೆಯನ್ನು ನಿರ್ವಹಿಸುವುದು ಬಹಳ ಮುಖ್ಯವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಬ್ಲೂಡು ಹಾಗೂ ಇತರ ಗ್ರಾಮದ ಸುಮಾರು 40ಕ್ಕೂ ಹೆಚ್ಚು ರೈತರು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ವಿತರಿಸಲಾದ ಟ್ರೈಕೋಕಾರ್ಡ್‌ಗಳನ್ನು ತಮ್ಮ ತೋಟಗಳಲ್ಲಿ ಕಟ್ಟುವುದರ ಮೂಲಕ ಕಾರ್ಯಕ್ರಮದ ಲಾಭ ಪಡೆದುಕೊಂಡರು.
ವಿಜ್ಞಾನಿಗಳಾದ ವಿಶ್ವನಾಥ್, ಸಿಂಧು, ಅರುಣಾ, ಶಿಡ್ಲಘಟ್ಟ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ತಿಮ್ಮರಾಜು, ವಿಸ್ತರಣಾಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.