ಹುಟ್ಟಿದ ತಕ್ಷಣ ತಾಯಿ ಕಳೆದುಕೊಂಡು ತಬ್ಬಲಿಯಾದ ಕೋತಿ ಮರಿಯನ್ನು ಕೆಲ ಕಾಲ ಪೋಷಿಸಿ, ನಂತರ ಇನ್ನೊಂದು ತಾಯಿ ಕೋತಿಯ ಮಡಿಲಿಗೆ ಒಪ್ಪಿಸಿರುವ ವಿಲಕ್ಷಣ ಪ್ರಾಣಿ ಪ್ರೀತಿಯನ್ನು ಮೆರೆಯಲಾಗಿದೆ.
ಶಿಡ್ಲಘಟ್ಟ ನಗರದ ದೇಶದಪೇಟೆ ನಿವಾಸಿ ಶೆಟ್ಟಪ್ಪನವರ ಶಶಿಧರ್ ಅವರ ತೋಟ ನಗರದ ಹೊರವಲಯದಲ್ಲಿದೆ. ಅಲ್ಲಿನ ತೆಂಗಿನ ಮರದ ಮೇಲೆ ಬೆಳಗ್ಗೆ ಐದು ಗಂಟೆ ಸುಮಾರಿನಲ್ಲಿ ಕೋತಿಯೊಂದಕ್ಕೆ ಹೆರಿಗೆಯಾಗಿದೆ. ಅದೇನಾಯಿತೋ ತಾಯಿ ಮತ್ತು ಮರಿ ಮರದಿಂದ ಕೆಳಗುರುಳಿವೆ. ತಾಯಿಯ ಬೆಚ್ಚನೆಯ ಅಪ್ಪುಗೆಯಲ್ಲಿದ್ದ ಮರಿ ಬದುಕುಳಿದಿದೆ, ಆದರೆ ತಾಯಿ ಕೋತಿ ಅಸುನೀಗಿದೆ.
ಆ ಸಮಯದಲ್ಲಿ ಇದನ್ನು ಕಂಡ ಶಶಿಧರ್ ಅವರ ತಮ್ಮ ಮುಕುಂದ್ ಪುಟ್ಟನೆಯ ಕೋತಿಮರಿಯನ್ನು ತಂದು ಬಾಟಲಿನಲ್ಲಿ ಹಾಲು ಕುಡಿಸಿದ್ದಾರೆ. ಕೆಲ ದಿನಗಳು ಅದರ ಆರೈಕೆ ಮಾಡಿದ್ದಾರೆ.
“ಆಗ ತಾನೆ ಹುಟ್ಟಿದ ಮರಿ. ಅದನ್ನು ಅದರ ತಾಯಿ ಬೆಚ್ಚಗಿಟ್ಟುಕೊಳ್ಳುವಂತೆಯೇ ಹಿಡಿದು ಬಾಟಲಿಯಲ್ಲಿ ಹಾಲು ಕುಡಿಸುತ್ತಿದ್ದೆ. ಒಂದೆರಡು ದಿನಗಳಿಗೆ ಅದು ಹೊಂದಿಕೊಂಡಿತು. ಹಾಗೆಂದು ಅದನ್ನು ಕೂಡಿಡಲಿಲ್ಲ. ಸ್ವಚ್ಚಂದವಾಗಿರಲು ಬಿಟ್ಟಿದ್ದೆ. ತೋಟದ ಮನೆಯಲ್ಲಿ ಅದು ಮುದ್ದುಮುದ್ದಾಗಿ ಆಡುತ್ತಿತ್ತು. ನೇತಾಡುವ ದಾರವನ್ನು ಹಿಡಿದು ಉಯ್ಯಾಲೆಯಂತೆ ಜೀಕುತ್ತಿತ್ತು. ಇದನ್ನು ದೂರದಿಂದ ಇನ್ನೊಂದು ತಾಯಿ ಕೋತಿ ಗಮನಿಸುತ್ತಿರುತ್ತಿತ್ತು. ಅದಕ್ಕೂ ಇದರ ವಯಸ್ಸಿನದ್ದೇ ಮರಿಯೊಂದಿತ್ತು. ನಮ್ಮ ಬಳಿ ಇದ್ದ ಮರಿಕೋತಿಯನ್ನು ಆ ಹಿರಿಯ ಕೋತಿ ಬಳಿ ಹೋಗಲು ಬಿಡುತ್ತಿದ್ದೆ. ಒಂದು ದಿನ ಈ ಕೋತಿ ಮರಿಗೂ ಅದು ಮೊಲೆಯೂಡಿಸಿತು. ನಂತರ ತನ್ನ ಮರಿಯೊಂದಿಗೆ ಇದನ್ನೂ ಬೆಚ್ಚಗೆ ಹಿಡಿದಿಟ್ಟುಕೊಂಡು ಕರೆದೊಯ್ದಿತು. ಈಗಲೂ ಅವು ಆಗಾಗ್ಗೆ ಬಂದು ಹೋಗುತ್ತವೆ” ಎಂದು ಮುಕುಂದ್ ಕೋತಿಯ ಮರಿಯನ್ನು ಸಾಕಿದ್ದನ್ನು ವಿವರಿಸಿದರು.
“ನಾವು ನಮ್ಮ ತೋಟದಲ್ಲಿ ಬಹುತೇಕ ತೆಂಗಿನಕಾಯಿಗಳನ್ನು ಕೋತಿಗಳಿಗೇ ಮೀಸಲಿಡುತ್ತೇವೆ. ಅವುಗಳಿಗೆ ಆಹಾರವನ್ನೂ ಪ್ರತಿದಿನ ಕೊಡುತ್ತೇವೆ. ತೋಟದ ಮರಗಿಡ ಹಣ್ಣು ಕಾಯಿಗಳಲ್ಲಿ ಪಶುಪಕ್ಷಿ ಪ್ರಾಣಿಗಳಿಗೆ ಸ್ವಲ್ಪ ಮೀಸಲಿಡಬೇಕು ಎಂಬುದು ಹಿಂದಿನಿಂದಲೂ ನಾವು ಪಾಲಿಸಿಕೊಂಡು ಬಂದ ಆಚಾರ” ಎನ್ನುತ್ತಾರೆ ಶೆಟ್ಟಪ್ಪನವರ ಶಶಿಧರ್.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi