ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸಿ ದೀರ್ಘಕಾಲಿಕ ಅನುಭವ ಮತ್ತು ನಾಯಕತ್ವ ಗುಣಗಳನ್ನು ಹೊಂದಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರನ್ನು ಅಭಿಯಾನದ ಅನುಷ್ಠಾನ ಮತ್ತು ಮೇಲ್ವಿಚಾರಕರಾಗಿ ‘ದುಡಿಯೋಣ ಬಾ’ ಅಭಿಯಾನದ ರಾಯಬಾರಿಯಾಗಿ ನೇಮಿಸಲಾಗುತ್ತದೆ ಎಂದು ಪಿ.ಡಿ.ಓ. ನಯನ ನೀಕತ್ ತಿಳಿಸಿದರು.
ಅಭಿಯಾನದ ಉದ್ದೇಶಗಳು ಕುರಿತು ಮಾತನಾಡಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಒಳಗೊಳ್ಳದೆ ಇರುವ ಕುಟುಂಬಗಳನ್ನು ಸಮೀಕ್ಷೆ ಮಾಡಿ ಅರ್ಹರಿಗೆ ಜಾಬ್‌ಕಾರ್ಡ್ ವಿತರಿಸುವುದು, ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಕೆಲಸ ನೀಡಿ ಸ್ವಾವಲಂಬನೆಯಿಂದ ಬದುಕುವಂತೆ ಮಾಡುವುದು, ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಆಸ್ತಿಗಳನ್ನು ಸೃಜನೆ ಮಾಡುವ ಮೂಲಕ ಪರ್ಯಾಯ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು, ವಿಶೇಷ ಚೇತನರು, ಮಹಿಳೆಯರು, ಹಿರಿಯ ನಾಗರಿಕರು, ಮಂಗಳಮುಖಿಯರು ಸೇರಿದಂತೆ ದುರ್ಬಲ ವರ್ಗಗಳಿಗೆ ಆದ್ಯತೆಯ ಮೇರೆಗೆ ಜಾಬ್‌ಕಾರ್ಡ್ ಮತ್ತು ಕೆಲಸ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಏ.1 ರಿಂದ ಜೂ.15 ರವರೆಗೆ ದುಡುಯೋಣ ಬಾ ಅಭಿಯಾನ ಚಾಲನೆಯಲ್ಲಿದ್ದು, ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ. ನರೇಗಾ ಕೂಲಿಯನ್ನು 289 ರಿಂದ 309 ರೂ.ಗೆ ಹೆಚ್ಚಿಸಿದ್ದು, ಇದರಿಂದ ಕೂಲಿಕಾರ್ಮಿಕರಿಗೆ ಆರ್ಥಿಕ ಬಲ ದೊರೆತಂತಾಗುತ್ತಿದೆ ಎಂದರು.
ಗ್ರಾಮ ಪಂಚಾಯತಿ ಕಾರ್ಯದರ್ಶಿ ಗೋಪಿನಾಥ್, ಸಿಬ್ಬಂದಿ ಶೇಖರ್,ದೇವರಾಜ್, ವೇಣು, ದೇವರಾಜ್, ಎಪ್.ಇ.ಎಸ್ ಸಂಸ್ಥೆಯ ಅಶ್ವಿನಿ,ಭವ್ಯ, ಕನಕರತ್ನಮ್ಮ, ಸ್ತ್ರೀ ಶಕ್ತಿ ಸಂಘದ ಹೇಮಾ,ಅನಿತ,ನಂಜಮ್ಮ,ಕಾಂತಮ್ಮ,ಪಾಪಮ್ಮ, ಗ್ರಾಮಸ್ಥರಾದ ಸೊಣ್ಣೇಗೌಡ,ಶಿವರಾಜ್,ಆಶಾ ಕಾರ್ಯಕರ್ತೆಯರು ಹಾಗೂ ಮತ್ತಿತರರು ಹಾಜರಿದ್ದರು.