Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಆನೂರು (Anur), ಜಂಗಮಕೋಟೆ (Jangamakote) ಹಾಗೂ ಜೆ.ವೆಂಕಟಾಪುರ (J Venkatapura) ಗ್ರಾಮ ಪಂಚಾಯಿತಿಗಳಿಗೆ (Grama Panchayat) ಕೇಂದ್ರ ತಂಡ ಆಗಮಿಸಿ ಸರ್ಕಾರದ ರಾಷ್ಟ್ರೀಯ ಯೋಜನೆಗಳಾದ MGNREGA ಹಾಗೂ PMY ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯ ಅನುಷ್ಟಾನ, ಪ್ರಗತಿ ಹಾಗೂ ಸಮುದಾಯದ ಭಾಗವಹಿಸುವಿಕೆ ಕುರಿತು ಪರಿಶೀಲನೆಗೆಂದು ತಾಲ್ಲೂಕಿನ ಆನೂರು, ಜಂಗಮಕೋಟೆ ಹಾಗೂ ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ್ದ ಎಂ.ರಂಶದ್ ಹಾಗೂ ಅಂಜುಮ್ ಅವರಿದ್ದ ತಂಡವು, ಕೇಂದ್ರ ಸರ್ಕಾರದ ರಾಷ್ಟ್ರೀಯ ಯೋಜನೆಗಳಾದ ನರೇಗಾ ಹಾಗೂ ಪಿಎಂಎವೈ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಆನೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿದ ಮಾದರಿ ಅಂಗನವಾಡಿ ಕೇಂದ್ರ, ಬೆಳ್ಳೂಟಿಯ ಕಲ್ಯಾಣಿ, ಶಾಲೆ, ಬೋದಗೂರಿನ ಶಾಲಾ ಕಾಂಪೌಂಡ್, ಜೆ.ವೆಂಕಟಾಪುರದಲ್ಲಿ ಡ್ರೈನೇಜ್, ಸುಗಟೂರು ಗ್ರಾಮದಲ್ಲಿ ಕುಂಟೆ ಕಾಲುವೆ ಕಾಮಗಾರಿಗಳನ್ನು ವೀಕ್ಷಿಸಿದರು.
ಈ ವೇಳೆ ತಂಡವು ಭೇಟಿ ಮಾಡಿದ ಜನಪ್ರತಿನಿಧಿಗಳು, ಜನ ಸಾಮಾನ್ಯರು ನರೇಗಾದಲ್ಲಿ ಇದೀಗ ನೀಡುತ್ತಿರುವ ಕೂಲಿ ಹಣವನ್ನು 309 ರೂಗಳಿಂದ 500 ರೂಗಳಿಗೆ ಹೆಚ್ಚಿಸಬೇಕು. ಕನಿಷ್ಠ 100 ದಿನಗಳ ಬದಲಿಗೆ ವರ್ಷದ ಉದ್ದಕ್ಕೂ ಕೆಲಸ ಸಿಗಬೇಕು ಮತ್ತು ಕೂಲಿ ಹಣವನ್ನು ಸಕಾಲಕ್ಕೆ ಪಾವತಿಸುವಂತೆ ಮನವಿ ಮಾಡಿದರು.
ಮಾದರಿ ಅಂಗನವಾಡಿ ಕೇಂದ್ರ, ಕಲ್ಯಾಣಿ ನಿರ್ಮಾಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರದ ತಂಡವು, ಕೆಲವೊಂದು ಕಡೆ ಜಾಬ್ ಕಾರ್ಡುಗಳ ನಿರ್ವಹಣೆಯಲ್ಲಿ ಲೋಪದೋಷಗಳು, ಕಾಮಗಾರಿ ಸ್ಥಳದಲ್ಲಿ ವಿವರವನ್ನು ಸರಿಯಾಗಿ ದಾಖಲಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಜಂಗಮಕೋಟೆ, ಆನೂರು, ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿಗಳ ಪಿಡಿಒ, ನರೇಗಾ ಜೆಇಗಳು ಹಾಜರಿದ್ದರು.