Home News ಗಣಿಗಾರಿಕೆಯಿಂದ ಪರಿಸರ, ವನ್ಯ ಸಂಕುಲಕ್ಕೆ ಹಾಗೂ ಮನುಕುಲಕ್ಕೆ ಹಾನಿ – ಜೆ.ಎಸ್.ವೆಂಕಟಸ್ವಾಮಿ

ಗಣಿಗಾರಿಕೆಯಿಂದ ಪರಿಸರ, ವನ್ಯ ಸಂಕುಲಕ್ಕೆ ಹಾಗೂ ಮನುಕುಲಕ್ಕೆ ಹಾನಿ – ಜೆ.ಎಸ್.ವೆಂಕಟಸ್ವಾಮಿ

0

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ತಡೆಯಬೇಕೆಂದು ಒತ್ತಾಯ ಮಾಡುತ್ತಿರುವ ಸಂಘಟನೆಗಳ ಕಾಳಜಿಯನ್ನು ಅಧಿಕಾರಿಗಳು ನಿರ್ಲಕ್ಷ್ಯದಿಂದ ಕಾಣಲಾಗುತ್ತಿದ್ದು, ಗಣಿ ಮಾಲಿಕರ ಬೆನ್ನಿಗೆ ರಕ್ಷಣೆಯಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಂತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ಆರೋಪಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಾದಲಿ ಹೋಬಳಿ ಬೈರನಹಳ್ಳಿ ಗ್ರಾಮದ ಸರ್ವೆ ನಂ.2 ರಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ರಸ್ತೆಗಳು ಸಂಪೂರ್ಣ ಹಾಳಾಗುತ್ತಿದ್ದರೂ ಅಧಿಕಾರಿಗಳ ಕಣ್ಣಿಗೆ ಮಾತ್ರ ಎಲ್ಲವೂ ಕಾನೂನುಬದ್ಧವಾಗಿಯೇ ಕಾಣುತ್ತಿದೆ. ಅನುಮತಿ ಪಡೆದೇ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡು ಗಣಿ ಮಾಲಿಕರ ಬೆನ್ನಿಗೆ ರಕ್ಷಣೆಯಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಂತಿದೆ. ಇಲಾಖೆ ವರ್ತನೆಯಿಂದ ಅನುಮತಿ ಪಡೆದವರು ಹಲವಾರು ಎಕರೆಗಳಷ್ಟು ಗಣಿಗಾರಿಕೆ ವಿಸ್ತರಿಸಿಕೊಂಡಿದ್ದಾರೆ”
ಗಣಿಗಾರಿಕೆ ನಡೆಯುತ್ತಿರುವುದರಿಂದ ಪರಿಸರಕ್ಕೆ ಹಾನಿಯುಂಟಾಗಿದ್ದು, ರೈತರು ಕೃಷಿ ಹಾಗೂ ವಾಸ ಮಾಡಲು ಸುತ್ತಮುತ್ತಲೂ ತೊಂದರೆಯಾಗಿದೆ. ಯಾವುದೇ ಕಂಪನಿ ಅಥವಾ ಪ್ರಭಾವಿತರಿಗೆ ಕಲ್ಲುಗಣಿಗಾರಿಕೆ ಮಾಡಲು ಅನುಮತಿ ನೀಡಬಾರದೆಂದು ಸಾರ್ವಜನಿಕರ ಪರವಾಗಿ ರೈತ ಸಂಘ ಹಾಗೂ ಹಸಿರು ಸೇನೆ ಪುಟ್ಟಣ್ಣಯ್ಯ ಬಣದಿಂದ ಮನವಿ ಮಾಡುತ್ತಿರುವುದಾಗಿ ಅವರು ತಿಳಿಸಿದರು.
ತಾಲ್ಲೂಕಿನ ಸಾದಲಿ ಗ್ರಾಮದ ಸಮೀಪದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಇತ್ತೀಚೆಗೆ ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ಸ್ಥಳೀಯರು ಗಣಿಗಾರಿಕೆ ನಡೆಸುತ್ತಿರುವ ಮಾಲೀಕರ ವಿರುದ್ಧ ಹೋರಾಟಗಳನ್ನು ಮಾಡಿ ಪೊಲೀಸ್‌ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ದೂರು ನೀಡಲಾಗಿದೆ.
“ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಅರಣ್ಯ ಪರಿಸರ ಹಾಳಾಗುತ್ತಿದೆ. ಜಾನುವಾರುಗಳಿಗೆ ಬರಗಾಲದ ಸಂದರ್ಭದಲ್ಲಿ ಮೇಯಲು ತೊಂದರೆಯಾಗುತ್ತದೆ. ಈ ಭಾಗದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದರೆ ಕೃಷಿ ಉದ್ಯೋಗ ಮನುಕುಲಕ್ಕೆ ವಿನಾಶಕ್ಕೆ ದಾರಿಯಾಗುತ್ತದೆ. ಜನ ಗುಳೆ ಹೋಗುವಂತಾಗುತ್ತದೆ. ಇದರಿಂದ ಪ್ರಕೃತಿ ಮಡಿಲಿನಲ್ಲಿರುವ ಬೆಟ್ಟಗುಡ್ಡಗಳನ್ನು ಹಾಗೂ ಅರಣ್ಯವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಇರುತ್ತದೆ. ಈಗಾಗಲೆ ನಮ್ಮ ಜಿಲ್ಲೆ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆಯಾಗಿದ್ದು, 2000 ಅಡಿ ಬೋರ್‌ವೆಲ್ ಕೊರೆದರೂ ನೀರು ಸಿಗದೇ ಬರಡು ಭೂಮಿ ಆಗಿರುತ್ತದೆ. ಈ ಕಾರಣಗಳಿಂದ ಪರಿಸರ ಉಳಿಸಿ ಹಾಗೂ ರೈತರು ಉಳಿವಿಗಾಗಿ ಜಿಲ್ಲಾಡಳಿತ ಸರ್ಕಾರಿ ಭೂಮಿಗಳನ್ನು ಮೀಸಲಿಡಿ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಮುಂದೆ ಗಣಿಗಾರಿಕೆಗಳಿಗೆ ಅನುಮತಿ ನೀಡಿದಲ್ಲಿ ಉಗ್ರ ಹೋರಾಟ ಮಾಡುತ್ತೇವೆ” ಎಂದು ಜಿಲ್ಲಾಡಳಿತಕ್ಕೆ ಈ ಸಂದರ್ಭದಲ್ಲಿ ಅವರು ಎಚ್ಚರಿಕೆ ನೀಡಿದರು.