Sidlaghatta : ಶಿಡ್ಲಘಟ್ಟ ನಗರದ ಉಲ್ಲೂರು ಪೇಟೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಡೈರಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಡೈರಿ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಬಹಳ ಹಿಂದೆ ಈ ಪ್ರದೇಶದಲ್ಲಿ ಹೈನುಗಾರರು ಹೆಚ್ಚಾಗಿದ್ದರು. ಹಸುಗಳಿಗೆ ಬೇಕಾದ ಮೇವನ್ನು ಅಂದರೆ ಹುಲ್ಲನ್ನು ಬೆಳೆಯುತ್ತಿದ್ದ ಈ ಪ್ರದೇಶ ಹುಲ್ಲೂರುಪೇಟೆ ಎಂದು ಕರೆಯಲ್ಪಟ್ಟಿತು. ಅದು ಆಡು ಭಾಷೆಯಲ್ಲಿ ಉಲ್ಲೂರುಪೇಟೆಯಾಯಿತು. ಈಗ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಡೈರಿ ಪ್ರಾರಂಭಿಸುವ ಮೂಲಕ ಗತವೈಭವ ಮರುಕಳಿಸಿದೆ ಎಂದು ಹೇಳಿದರು.
ಇಲ್ಲಿನ ರೈತ ಕುಟುಂಬಗಳಿಗೆ ಮತ್ತು ಹೈನುಗಾರರಿಗೆ ಹಾಲಿನ ಡೇರಿ ಅವಶ್ಯಕತೆ ಇದೆ ಎಂದು ಮನಗಂಡು ಹಲವಾರು ಮುಖಂಡರ ಪ್ರಯತ್ನ ಮತ್ತು ಶ್ರಮದಿಂದ ನೂತನ ಹಾಲಿನ ಡೇರಿ ಪ್ರಾರಂಭ ಮಾಡಲಾಗಿದೆ. ಕಳೆದ ಹಲವು ದಿನಗಳ ಹಿಂದೆ ಡೇರಿಗೆ ಚುನಾವಣೆ ಸಹ ನಡೆದು ಅಧ್ಯಕ್ಷರು ಸಹ ಆಯ್ಕೆಯಾಗಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ನಿರ್ದೇಶಕರು ಒಟ್ಟಾಗಿ ಕೆಲಸ ಮಾಡಿ ಈ ಸಂಘವನ್ನು ಮುಂದಿನ ದಿನಗಳಲ್ಲಿ ಅಭಿವೃದ್ದಿ ಪಥದತ್ತ ಕೊಂಡೊಯ್ಯುವಂತಾಗಲಿ ಎಂದರು.
ಸಿಲ್ಕ್ ಸಿಟಿಯಲ್ಲಿ ಮಿಲ್ಕ್ ಡೇರಿ ಪ್ರಾರಂಭವಾಗಿರುವುದು ಸಂತಸದ ವಿಷಯ, ಡೈರಿ ಇದ್ದರೆ ರೈತರಿಗೆ ಹಲವು ರೀತಿಯ ಅನುಕೂಲತೆ ಸಿಗುತ್ತದೆ. ರೈತರು ನೆಮ್ಮದಿಯಾಗಿ ಜೀವನ ಸಾಗಿಸಲು ಇದು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪುರುಷೋತ್ತಮ್, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಮುಖಂಡ ಆನಂದ್ ಗೌಡ, ಕಾರ್ಯದರ್ಶಿ ಶ್ರೀನಿವಾಸ್, ಉಪಾಧ್ಯಕ್ಷ ತೇಜಸ್, ನಿರ್ದೇಶಕರುಗಳಾದ ಕಿರಣ್ ಕುಮಾರ್, ಕೆ.ನಾರಾಯಣಸ್ವಾಮಿ,, ಮುನಿರೆಡ್ಡಿ, ಬಿ. ನಾರಾಯಣಸ್ವಾಮಿ, ವೇಣುಗೋಪಾಲ್, ಕೆ.ಟಿ ನಟರಾಜ್, ರಮೇಶ್, ಅಶ್ವಥಮ್ಮ, ನಳಿನಿ, ನಾಗರಾಜ್ , ಡಿ.ಎಂ ಕಿರಣ್ ಕುಮಾರ್ ಹಾಜರಿದ್ದರು.