Melur, Sidlaghatta : ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶನಿವಾರ ಪುರಾಣ ಪ್ರಸಿದ್ಧ ಶ್ರೀ ಗಂಗಾದೇವಿಯ ಬ್ರಹ್ಮರಥೋತ್ಸವವನ್ನು ವಿಜೃಂಭಣೆಯಿಂದ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ರಜಸ್ವ ನಿರೀಕ್ಷಕರು ಮತ್ತು ಇತರ ಅಧಿಕಾರಿಗಳು ರಥೋತ್ಸವಕ್ಕೆ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು.
ಹಳೆಯ ಇತಿಹಾಸವನ್ನು ಹೊಂದಿರುವ ಮೇಲೂರಿನ ಶ್ರೀ ಗಂಗಾದೇವಿ ದೇವಾಲಯವನ್ನು ವಿಶೇಷ ಹೂವಿನ ಅಲಂಕಾರದಿಂದ ಅಲಂಕರಿಸಲಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಬ್ರಹ್ಮರಥೋತ್ಸವ ಕಾರ್ಯಕ್ರಮ ಆಯೋಜಿಸಲಾಯಿತು. ಜಾನಪದ ಕಲಾತಂಡಗಳ ಪ್ರದರ್ಶನ, ತಮಟೆ ವಾದ್ಯ, ಗಾರುಡಿ ಗೊಂಬೆಗಳ ನೃತ್ಯಗಳು ಭಕ್ತರ ಕಣ್ಮನ ಸೆಳೆಯುವಂತಾಗಿತ್ತು.
ಬ್ರಹ್ಮರಥೋತ್ಸವದ ಅಂಗವಾಗಿ ಹೋಮಕುಂಡವನ್ನು ಸ್ಥಾಪಿಸಿ ಲೋಕಕಲ್ಯಾಣಾರ್ಥವಾಗಿ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿಸಲ್ಪಟ್ಟವು. ಶ್ರೀ ಗಂಗಾದೇವಿಗೆ ವಿಶೇಷ ಹೂವಿನ ಅಲಂಕಾರಗಳೊಂದಿಗೆ ಪೂಜೆಯನ್ನು ಅರ್ಪಿಸಲಾಯಿತು. ಭಕ್ತರು ರಥದ ತುದಿಗೆ ದವನದೊಂದಿಗೆ ಬಾಳೆಹಣ್ಣು ಎಸೆದು ತಾಯಿಯಲ್ಲಿ ತಮ್ಮ ಇಷ್ಟಾರ್ಥಗಳಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು. ದೇವಾಲಯದ ಆವರಣದಲ್ಲಿ ಉಚಿತ ಅನ್ನಸಂತರ್ಪಣೆಯೂ ವ್ಯವಸ್ಥೆ ಮಾಡಲಾಗಿತ್ತು.
ಶ್ರೀ ಗಂಗಾದೇವಿ ಸ್ಥಳೀಯ ಭಕ್ತರಲ್ಲಿ ಮಾತ್ರವಲ್ಲ, ಸುತ್ತಮುತ್ತಲಿನ ಹಳ್ಳಿಗಳ ಜನರಿಗೂ ಆರಾಧ್ಯ ದೈವವಾಗಿ ಪೂಜಿತಳಾಗಿದ್ದಾಳೆ. ಜಾತ್ರಾ ಮಹೋತ್ಸವದ ಅಂಗವಾಗಿ ಸೋಪ್ಪಿನ ರಥ, ದೀಪೋತ್ಸವ, ರಥೋತ್ಸವಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಹಳ್ಳಿ ಹೆಣ್ಣುಮಕ್ಕಳು ಈ ರಥೋತ್ಸವದಲ್ಲಿ ತವರಿನಿಂದ ಆಗಮಿಸಿ ಪಾಲ್ಗೊಳ್ಳುವುದು ಪ್ರಚಲಿತವಾಗಿದೆ.
ವಾಲ್ಮೀಕಿ ಮತದ ನಾಯಕ ಜನಾಂಗದವರು ಸೋಪ್ಪಿನ ರಥ ತಯಾರಿಸಿ, ಮರವನ್ನು ಕಡಿಯುವ ಮಡಿಯ ಸಂಪ್ರದಾಯ ಪಾಲಿಸಿ ಹಸಿರು ಮರದಿಂದ ರಥವನ್ನು ನಿರ್ಮಿಸಿ, ಹೂವಿನಿಂದ ಹಾಗೂ ದೀಪಗಳಿಂದ ಅಲಂಕರಿಸಿ, ತಾಯಿಗೆ ಕೀರ್ತನೆ, ಭಕ್ತಿ ಗೀತೆಗಳೊಂದಿಗೆ ಪೂಜೆ ಸಲ್ಲಿಸಿದರು. ಉತ್ಸವದಲ್ಲಿ ಹುಳಿ ಸೊಪ್ಪಿನ ಸಾರು ಹಾಗೂ ಮುದ್ದೆ ತಂದು ತೀರ್ಥ ಪ್ರಸಾದ ವಿತರಿಸಲಾಯಿತು.
ಮುತ್ತೂರು, ಮಳ್ಳೂರು, ಕಾಚಹಳ್ಳಿ, ಭಕ್ತರಹಳ್ಳಿ, ಗಂಗನಹಳ್ಳಿ, ಕಂಬದಹಳ್ಳಿ, ಅಪ್ಪೇಗೌಡನಹಳ್ಳಿ, ಚೌಡಸಂದ್ರ, ಕೇಶವಪುರ, ಬೆಳ್ಳೂಟಿ ಸೇರಿದಂತೆ ಅನೇಕ ಗ್ರಾಮಗಳಿಂದ ಭಕ್ತರು ಆಗಮಿಸಿ ಪೂಜೆ ಹಾಗೂ ರಥೋತ್ಸವದಲ್ಲಿ ಭಾಗವಹಿಸಿದರು.
ಈ ಸಂದರ್ಭ ಜೆಡಿಎಸ್ ಮುಖಂಡ ಸಚಿನ್, ಗ್ರಾಮ ಪಂಚಾಯಿತಿ ಸದಸ್ಯ ಆರ್.ಎ. ಉಮೇಶ್, ಎಂ.ಕೆ. ರವಿಪ್ರಸಾದ್, ಎಂ.ಜೆ. ಶ್ರೀನಿವಾಸ್, ಡಾ. ರಾಜ್ ಕುಮಾರ್ ಅಭಿಮಾನಿ ಸಂಘದ ಧರ್ಮೇಂದ್ರ, ಕೆ.ಎಸ್. ಮಂಜುನಾಥ್, ಸುದರ್ಶನ್, ಸುದೀರ್, ಶ್ರೀನಿವಾಸಮೂರ್ತಿ (ಪುಲಿ), ಶಿವಕುಮಾರ್, ಜೇಜಿಗೌಡ, ಗೋಪಾಲರೆಡ್ಡಿ, ಎಂ. ಶ್ರೀನಿವಾಸ, ರಮೇಶ್, ಎನ್.ಎಲ್.ಎನ್.ಮೂರ್ತಿ, ಅರ್ಚಕ ಅಮೃತರಾಜ್, ಮುತ್ತೂರು ಶ್ರೀನಿವಾಸಮೂರ್ತಿ ಮತ್ತು ದೇವಾಲಯದ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.