Melur, Sidlaghatta: ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶ್ರೀಬತ್ತೇಶ್ವರಸ್ವಾಮಿಯ ಜಾತ್ರಾ ಮಹೋತ್ಸವವು ಸೋಮವಾರ ಭಕ್ತಿಭಾವ ಹಾಗೂ ಸಡಗರ ಸಂಭ್ರಮದ ನಡುವೆಯೇ ವಿಜೃಂಭಣೆಯಿಂದ ಆಚರಿಸಲಾಯಿತು. ಮೇಲೂರು ಸೇರಿದಂತೆ ಕರ್ನಾಟಕದ ನಾನಾ ಭಾಗಗಳಿಂದ ಆಗಮಿಸಿದ ಸಾವಿರಾರು ಶ್ರೀಬತ್ತೇಶ್ವರಸ್ವಾಮಿಯ ಕುಲಬಂಧುಗಳು ಈ ಅದ್ದೂರಿ ಜಾತ್ರೆಗೆ ಸಾಕ್ಷಿಯಾದರು.
ಈ ಬಾರಿ ಜಾತ್ರೆ ಒಂಬತ್ತು ವರ್ಷಗಳ ವಿಳಂಬದ ನಂತರ ಪುನಃ ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮದ ದಾರಿಗಳೆಲ್ಲ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಬಾಳೆದಿಂಡು ಹಾಗೂ ಮಾವಿನ ತೋರಣಗಳಿಂದ ಊರಿಗೆ ನವ ರೂಪ ನೀಡಲಾಗಿತ್ತು. ಶ್ರೀಬತ್ತೇಶ್ವರಸ್ವಾಮಿ ದೇವಾಲಯದೊಂದಿಗೆ ಗ್ರಾಮದ ಶ್ರೀಗಂಗಮ್ಮದೇವಿ ಸೇರಿದಂತೆ ಇತರೆ ದೇವಾಲಯಗಳಲ್ಲಿ ವಿಶೇಷ ಪೂಜೆ, ಮಹಾ ಮಂಗಳಾರತಿ, ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನೆಲೆಸಿರುವ ಬತ್ತೇಶ್ವರಸ್ವಾಮಿ ದೇವಾಲಯದ ಕುಲಬಂಧುಗಳು ಕುಟುಂಬ ಸಮೇತರಾಗಿ ಹಾಜರಾಗಿ, ಸಂಪ್ರದಾಯಬದ್ಧವಾಗಿ ಪಾಲ್ಗೊಂಡರು. ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು ತಲೆಯ ಮೇಲೆ ತಂಬಿಟ್ಟು ದೀಪಗಳನ್ನು ಹೊತ್ತುಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತಿಪೂರ್ವಕ ಪ್ರದಕ್ಷಿಣೆ ಹಾಕಿ ದೇವರಿಗೆ ಅರ್ಪಿಸಿದರು.
ಜನಪದ ಕಲಾತಂಡಗಳಾದ ಡೊಳ್ಳು ಕುಣಿತ, ಗಾರುಡಿಗೊಂಬೆ, ಕರಡಿ ವೇಷಗಳು ಜಾತ್ರೆಗೆ ಜೀವಂತತೆ ತುಂಬಿದವು. ವಿಶೇಷವಾಗಿ ಹಾಲು ಮತಸ್ತ ಕುಟುಂಬಗಳ ಭಕ್ತಿಯ ಸಂಪ್ರದಾಯದಂತೆ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ಪವಾಡ ಕಾರ್ಯ ಭಕ್ತರ ಮನಸ್ಸುಗಳನ್ನು ತಟ್ಟಿದ ಕ್ಷಣವಾಯಿತು. ದೇವಾಲಯದ ಆವರಣದಲ್ಲಿ ಮೊಣಕಾಲೂರಿ ಕುಳಿತ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ದೃಶ್ಯವು ಸ್ಥಳದಲ್ಲಿದ್ದ ಭಕ್ತರನ್ನು ಆನಂದದಿಂದ ಉಸಿರುಗಟ್ಟುವಂತೆ ಮಾಡಿತು.
ಜಾತ್ರಾ ಮಹೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಶಿಡ್ಲಘಟ್ಟದ ಶಾಸಕ ಬಿ.ಎನ್. ರವಿಕುಮಾರ್ ಸೇರಿದಂತೆ ಬತ್ತೇಶ್ವರಸ್ವಾಮಿಯ ಕುಲ ಬಂಧುಗಳ ಪ್ರಮುಖ ಮುಖಂಡರು ಭಾಗವಹಿಸಿದ್ದರು. ಈ ಪವಿತ್ರ ಜಾತ್ರೆಯು ಭಕ್ತರ ನಂಬಿಕೆಗೆ, ಸಂಸ್ಕೃತಿಗೆ ಹಾಗೂ ಗ್ರಾಮೀಣ ಶ್ರದ್ಧಾ ಪರಂಪರೆಗೆ ಮೆರಗು ನೀಡುವಂತಾಯಿತು.