ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಎಸ್‌ಎಫ್‌ಸಿಎಸ್ ಬ್ಯಾಂಕ್‌ನ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರುಗಳು ಡಿಸಿಸಿ ಬ್ಯಾಂಕ್‌ನಲ್ಲಿ ನೆರವೇರಿಸಿದ ಸನ್ಮಾನ ಸ್ವೀಕರಿಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮಾತನಾಡಿದರು.
ಸಹಕಾರಿ ವ್ಯವಸ್ಥೆಯಲ್ಲಿ ಶೇ 73 ರಷ್ಟು ಮಂದಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾಗಿದ್ದೇವೆ. ಸಹಕಾರಿಗಳಾದವರು ಪಕ್ಷಾತೀತ ಹಾಗೂ ಜ್ಯಾತ್ಯಾತೀತವಾಗಿ ಸಹಕಾರಿ ಕ್ಷೇತ್ರವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ ಎಂದು ಅವರು ತಿಳಿಸಿದರು.
ಸಹಕಾರಿ ವ್ಯವಸ್ಥೆಯಲ್ಲಿ ಶೇ 73 ರಷ್ಟು ರೈತರಿದ್ದಾರೆ. ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದಿಂದ ಸಿಗುವ ಸಾಲ ಇನ್ನಿತರೆ ಸವಲತ್ತುಗಳು ಸಿಗಬೇಕು, ಇಲ್ಲವಾದಲ್ಲಿ ಸಹಕಾರಿ ವ್ಯವಸ್ಥೆಗೆ ಅರ್ಥವೂ ಸಿಗೊಲ್ಲ. ಉಳಿಗಾಲವೂ ಇಲ್ಲ ಎಂದರು.
ಇಲ್ಲವಾದಲ್ಲಿ ಬಲಾಢ್ಯರದ್ದೇ ಪಾರುಪತ್ಯೆ ನಡೆದು ಸಹಕಾರಿ ವ್ಯವಸ್ಥೆಯು ದಾರಿ ತಪ್ಪುತ್ತದೆ. ಕೃಷಿ ಆಧಾರಿತ ದೇಶದಲ್ಲಿನ ರೈತರು ಇನ್ನಷ್ಟು ದುರ್ಬಲಗೊಂಡು ಕಷ್ಟಕ್ಕೆ ತುತ್ತಾಗಲಿದ್ದಾರೆ ಎಂದರು.
ಮಳ್ಳೂರು ಎಸ್‌ಎಫ್‌ಸಿಎಸ್ ಬ್ಯಾಂಕ್‌ನ ನೂತನ ಆಡಳಿತ ಮಂಡಳಿಯವರು ಹೆಚ್ಚಿನ ಸಾಲ ಸವಲತ್ತು ನೀಡುವಂತೆ ಇಟ್ಟ ಮನವಿಗೆ ಸ್ಪಂದಿಸಿ ಸಾಲ ನೀಡುವುದಾಗಿ ಭರವಸೆ ನೀಡಿದರು.
ಮಳ್ಳೂರು ಎಸ್‌ಎಫ್‌ಸಿಎಸ್ ಬ್ಯಾಂಕಿನ ನೂತನ ಅಧ್ಯಕ್ಷ ಭಕ್ತರಹಳ್ಳಿ ಮುನಿರಾಜು ಮಾತನಾಡಿ, ಮಳ್ಳೂರು ಎಸ್‌ಎಫ್‌ಸಿಎಸ್ ಬ್ಯಾಂಕ್ ವ್ಯಾಪ್ತಿಯಲ್ಲಿ ಸಣ್ಣ, ಅತಿ ಸಣ್ಣ, ಮದ್ಯಮ ಹಾಗೂ ದೊಡ್ಡ ರೈತರು ಇದ್ದಾರೆ. ಹಾಗೂ ಮಹಿಳಾ ಸ್ವ ಸಂಘಗಳ ಸಂಖ್ಯೆಯೂ ಬಹಳಷ್ಟಿದೆ. ಇದೀಗ ನೀಡುತ್ತಿರುವ ಸಾಲದ ಪ್ರಮಾಣ ಸಾಲದು, ಕೋಳಿ ಫಾರಂ, ದ್ರಾಕ್ಷಿ ಹಾಗೂ ನಾನಾ ತರಕಾರಿ ಬೆಳೆಗಳನ್ನು ಬೆಳೆಯುವ ರೈತರು ಸಾಕಷ್ಟು ಸಂಖ್ಯೆಯಲ್ಲಿದ್ದು ಅವರ ಅಗತ್ಯಕ್ಕೆ ತಕ್ಕಂತೆ ಸಾಲ ಕೊಡಬೇಕೆಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಗೋವಿಂದೇಗೌಡರು, ನಿಮ್ಮ ಬ್ಯಾಂಕಿನ ಸಾಲದ ಮರುಪಾವತಿಯು ಶೇ 100 ರಷ್ಟಿದೆ. ಹಾಗಾಗಿ ನಿಮಗೆ ಅಗತ್ಯ ಎಷ್ಟು ಸಾಲ ಬೇಕಿದೆಯೋ ಅಷ್ಟೂ ಪಟ್ಟಿಯನ್ನು ನೀಡಿದರೆ ಸಾಲ ನೀಡಲು ನಾನು ಸಿದ್ದ ಎಂದು ಭರವಸೆ ನೀಡಿದರು.
ಮಳ್ಳೂರು ಎಸ್‌ಎಫ್‌ಸಿಎಸ್ ಬ್ಯಾಂಕ್‌ನ್ ಆಡಳಿತ ಮಂಡಳಿಯವರು ಗೋವಿಂದೇಗೌಡರಿಗೆ ಭಾರಿಗಾತ್ರದ ಹೂವಿನ ಹಾರ ಹಾಕಿ ಸನ್ಮಾನಿಸಿ ಸಹಿ ಹಂಚಿದರು.
ಸಹಕಾರಿ ರತ್ನ ಕೆ.ಗುಡಿಯಪ್ಪ, ಬ್ಯಾಂಕ್‌ನ ಅಧ್ಯಕ್ಷ ಭಕ್ತರಹಳ್ಳಿ ಮುನಿರಾಜು, ಉಪಾಧ್ಯಕ್ಷ ನಿಶಾಂತ್, ಹಿರಿಯ ನಿರ್ದೇಶಕರಾದ ಜಿ.ಎಂ.ರಾಮರೆಡ್ಡಿ, ಎಂ.ಆರ್.ಮುನಿಕೃಷ್ಣಪ್ಪ, ಬಿ.ಎಂ.ವೆಂಕಟರೆಡ್ಡಿ, ಲಕ್ಷ್ಮೀನಾರಾಯಣ್, ಅಣ್ಣಯ್ಯಪ್ಪ, ರಮೇಶ್ ಹಾಜರಿದ್ದರು.