Mallur, Sidlaghatta : ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಸಂಭವಿಸುವ ಅಡ್ಡ ಪರಿಣಾಮಗಳಿಂದ ದೂರ ಉಳಿಯಲು ಸಾಧ್ಯವಾಗಿದೆ. ವಿನಾಕಾರಣ ಭಯ ಪಡುವ ಅಗತ್ಯವಿಲ್ಲ ಎಂದು ಬೆಂಗಳೂರಿನ ಸಮತ್ವಂ ಸೇವಾ ಸಂಸ್ಥೆಯ ಮುಖ್ಯಸ್ಥ ಡಾ. ಸತ್ಯನಾರಾಯಣ ಶ್ರೀಕಂಠ ಹೇಳಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿನ ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ಸಮತ್ವಂ ಸ್ವಯಂ ಸೇವಾ ಸಂಸ್ಥೆ ಹಾಗೂ ಪುವ್ವಾಡ ಫೌಂಡೇಷನ್‌ನ ಆಶ್ರಯದಲ್ಲಿ ಭಾನುವಾರ ನಡೆದ ಅಧಿಕ ರಕ್ತದೊತ್ತಡ, ಮಧುಮೇಹ, ಮತ್ತು ಕಣ್ಣಿನ ಉಚಿತ ತಪಾಸಣೆ ಹಾಗೂ ಔಷಧೋಪಚಾರ ಶಿಬಿರದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಪ್ರತಿ 100 ಮಂದಿಗೆ 20 ಮಂದಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ 10 ಮಂದಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳನ್ನು ಆರಂಭದ ಹಂತದಲ್ಲೇ ತಪಾಸಣೆ ಮಾಡುವ ಮೂಲಕ, ವೈದ್ಯರ ಸಲಹೆ ಮೇರೆಗೆ ಔಷಧಿಗಳನ್ನು ಬಳಸುವುದು ಮತ್ತು ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ತರುವುದರಿಂದ ಕಡಿಮೆಗೆ ತರಲು ಸಾಧ್ಯ.
ವ್ಯಾಯಾಮ, ಯೋಗ, ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಉಂಟಾಗುವ ದೀರ್ಘಕಾಲೀನ ಪರಿಣಾಮಗಳನ್ನು ತಪ್ಪಿಸಬಹುದು. ಅಡ್ಡ ಪರಿಣಾಮಗಳಿಂದ ದೂರವಾಗಲು ಇದು ಸಹಾಯಕ ಎಂದು ಅವರು ವಿವರಿಸಿದರು.
ಸಮತ್ವಂ ಸೇವಾ ಸಂಸ್ಥೆಯು ದಾನಿಗಳ ನೆರವಿನಿಂದ ರಾಜ್ಯದ ಉದ್ದಗಲಕ್ಕೂ 3 ಲಕ್ಷಕ್ಕೂ ಹೆಚ್ಚು ಮಂದಿಗೆ ಉಚಿತ ತಪಾಸಣೆ ಮತ್ತು ಔಷಧಿ ವಿತರಣೆ ಮಾಡುತ್ತಿದೆ. ಬೆಂಗಳೂರು ಕೇಂದ್ರದ ಕಚೇರಿಯಿಂದ ಇಂತಹ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ಮಳ್ಳೂರಿನ ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ಈಗಿನಿಂದಲೇ ನಮ್ಮ ರಾಮಕೃಷ್ಣ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸಿದ್ದೇವೆ ಎಂದು ಡಾ. ಶ್ರೀಕಂಠ ಹೇಳಿದರು.
ಆಯ್ದ 350 ಮಂದಿಗೆ 3 ವರ್ಷಗಳ ಕಾಲ ನಿರಂತರ ತಪಾಸಣೆ ಮತ್ತು ಉಚಿತ ಔಷಧಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಶಿಬಿರದಲ್ಲಿ 700 ಕ್ಕೂ ಹೆಚ್ಚು ಜನರಿಗೆ ಮಧುಮೇಹ, ಅಧಿಕ ರಕ್ತದೊತ್ತಡ, ಮತ್ತು ಕಣ್ಣಿನ ತಪಾಸಣೆ ಮಾಡಿ ಔಷಧಿಗಳನ್ನು ವಿತರಿಸಲಾಯಿತು. ಶಿಬಿರಾರ್ಥಿಗಳಿಗೆ ಪೌಷ್ಟಿಕ ಪಾನೀಯ ಮತ್ತು ಊಟವನ್ನು ವ್ಯವಸ್ಥೆ ಮಾಡಲಾಗಿತ್ತು.
ಡಾ. ಚೈತ್ರ, ಡಾ. ಪುವ್ವಾಡ ಸಂದೀಪ್, ಡಾ. ಪ್ರಿಯಾಂಕ, ಎಂ.ಕೆ. ವೀರಕುಮಾರ್, ಹಾಗೂ ಸ್ವಯಂಸೇವಕರಾದ ಮನೋಜ್, ಎನ್. ಮಂಜುನಾಥ್, ಪ್ರವೀಣ್, ವಿನಯ್, ಮತ್ತು ಸತೀಶ್ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.