Mallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸಮೀಪದ ಅಂಕತಟ್ಟಿ ಗೇಟ್‌ನಲ್ಲಿರುವ ಎಸ್.ಎನ್.ಫಾರ್ಮ್‌ನಲ್ಲಿ “ಕೃಷಿ ಅರಣ್ಯ, ಪರಿಸರ ವಿಜ್ಞಾನ ಮತ್ತು ಆರ್ಥಿಕ ಸುಸ್ಥಿರತೆ” ಕುರಿತ ಕಾರ್ಯಾಗಾರ ನಡೆಯಿತು.
ಮರ ಆಧಾರಿತ ಆಹಾರ ವ್ಯವಸ್ಥೆ, ತೋಟಗಾರಿಕೆ, ಕೃಷಿ ಅರಣ್ಯ, ದ್ರಾಕ್ಷಿ ಕೃಷಿಯಲ್ಲಿ ಸುಸ್ಥಿರತೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರಗತಿಪರ ರೈತರು, ತೋಟಗಾರಿಕೆ ಹಾಗೂ ಅರಣ್ಯ ತಜ್ಞರು, ಸಂಗೀತ ನಿರ್ದೇಶಕರು, ನಟರು ಮತ್ತು ಸಾಮಾಜಿಕ ಕಾರ್ಯಕರ್ತರು ಚರ್ಚೆ ನಡೆಸಿದರು.
ಭೂ ವಿಘಟನೆ, ಜೀವವೈವಿಧ್ಯತೆಯ ನಷ್ಟ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳು ಸೇರಿದಂತೆ ವಿವಿಧ ಸವಾಲುಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಮರ ಬೆಳೆಗಾರರನ್ನು ಬೆಂಬಲಿಸುವಂತೆ, ಭೂ ನಿರ್ವಹಣಾ ಪದ್ಧತಿಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವಂತೆ ತಜ್ಞರು ಸಲಹೆ ನೀಡಿದರು. ತಂತ್ರಜ್ಞಾನ ಆಧಾರಿತ ಮರದ ಟ್ರ್ಯಾಕಿಂಗ್, ಜಿಯೋಟ್ಯಾಗಿಂಗ್ ಮತ್ತು ನವೀನ ಪರಿಹಾರಗಳ ಬಗ್ಗೆ ವಿಶೇಷವಾಗಿ ಮಾಹಿತಿ ಹಂಚಲಾಯಿತು.
ಕೃಷಿ ಅರಣ್ಯ ರೈತರು ಮತ್ತು ತಂತ್ರಜ್ಞರ ಸಂಸ್ಥೆ (ಐ.ಎ.ಎಫ್.ಟಿ) ಅಧ್ಯಕ್ಷ ಡಾ.ಎನ್.ಡಿ.ತಿವಾರಿ ಮಾತನಾಡಿ, “ಪರಿಸರ ಸವಾಲುಗಳಿಗೆ ಉತ್ತರವಾಗಿ ಮರ ಆಧಾರಿತ ಕೃಷಿ ಪದ್ಧತಿಗಳು ಆಹಾರ, ಪೌಷ್ಠಿಕತೆ, ಪರಿಸರ ಮತ್ತು ಆರ್ಥಿಕ ಸುಸ್ಥಿರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವು ಮಣ್ಣಿನ ಫಲವತ್ತತೆ ಹೆಚ್ಚಿಸಲು, ನೀರಿನ ಶೇಖರಣಾ ಶಕ್ತಿಯನ್ನು ವೃದ್ಧಿಸಲು, ಹವಾಮಾನ ಬದಲಾವಣೆಯನ್ನು ತಗ್ಗಿಸಲು ಹಾಗೂ ರೈತರಿಗೆ ವೈವಿಧ್ಯಮಯ ಜೀವನೋಪಾಯದ ಅವಕಾಶಗಳನ್ನು ಒದಗಿಸಲು ನೆರವಾಗುತ್ತವೆ. ಬೆಳೆ, ತೋಟಗಾರಿಕೆ ಮತ್ತು ಜಾನುವಾರುಗಳೊಂದಿಗೆ ಮರಗಳನ್ನು ಸಂಯೋಜಿಸಿ ಬೆಳೆಸುವ ಕೃಷಿ ಅರಣ್ಯ ಪದ್ಧತಿ ಬಹುಮುಖ ಪ್ರಯೋಜನ ನೀಡುತ್ತದೆ” ಎಂದು ವಿವರಿಸಿದರು.
ಐ.ಎ.ಎಫ್.ಟಿ ಕಾರ್ಯದರ್ಶಿ ಡಾ.ರಮೇಶ್, ಎಚ್.ಎಂ.ಕೆ.ಪಿ ಅಧ್ಯಕ್ಷ ಎಲ್.ಕಾಳಪ್ಪ, ತೋಟಗಾರಿಕಾ ತಜ್ಞ ಸಂತೆ ನಾರಾಯಣಸ್ವಾಮಿ, ರೆಡ್ ಕ್ರಾಸ್ ನಿರ್ದೇಶಕ ಹಾಸನ್ ಮೋಹನ್, ವಿಶ್ರಾಂತ ಉಪಕುಲಪತಿ ಡಾ.ರಾಜೇಂದ್ರಪ್ರಸಾದ್, ಚಂದ್ರಶೇಖರ್ ಬಿರಾದರ್, ಮೇಲೂರು ಸಚಿನ್ ಮತ್ತು ಡಾ.ಅಶತ್ಥಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.