Sidlaghatta : ಯಾವುದೆ ರೀತಿಯ ಸಾಂಕ್ರಾಮಿಕ ಅಥವಾ ಅಸಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಆರೋಗ್ಯ ಕುರಿತು ವಯುಕ್ತಿಕವಾಗಿ ಮುನ್ನೆಚ್ಚರಿಕೆ ಅಗತ್ಯ ಇರಬೇಕಾಗುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಆಶ್ರಯದಲ್ಲಿ ಗುರುವಾರ ನಡೆದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ “ಮಲೇರಿಯಾ ವಿರೋಧಿ ಮಾಸಾಚರಣೆ ಜೂನ್-2024”ರ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದೀಗ ಮಳೆಗಾಲವಾದ್ದರಿಂದ ಸಹಜವಾಗಿ ಮಳೆ ನೀರು ಪರಿಸರದಲ್ಲಿ ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚು, ಸೊಳ್ಳೆಗಳ ಕಡಿತದಿಂದ ನಾನಾ ರೀತಿಯ ಜ್ವರ, ರೋಗಗಳೂ ಹೆಚ್ಚು ಕಾಡುತ್ತವೆಯಾದ್ದರಿಂದ ಹೆಚ್ಚು ಜಾಗ್ರತೆಯಿಂದ ಇರಬೇಕೆಂದರು.
ಮಲೇರಿಯಾ ವಿರೋಧಿ ಮಾಸಾಚರಣೆ ನಡೆಸುತ್ತಿದ್ದು ಮಲೇರಿಯಾ ರೋಗದ ವಿರುದ್ದ ನಾವು ಹೋರಾಡಬೇಕಿದೆ. ರೋಗ ಬರದಂತೆ ಮುಂಜಾಗ್ರತೆ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸವನ್ನು ಇಲಾಖೆಯಿಂದ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ದೇವರಾಜ್, ಆರೋಗ್ಯ ಸಂರಕ್ಷಣಾಧಿಕಾರಿ ಮುನಿರತ್ನಮ್ಮ, ಇಲಾಖೆಯ ಸಿಬ್ಬಂದಿ ನಂದಿನಿ, ಚೈತ್ರ, ವಿಜಯಮ್ಮ, ಅಫ್ರೋಜ್, ಪ್ರಣತಿ, ನರಸಿಂಹಮೂರ್ತಿ, ಕೀರ್ತಿ ಹಾಜರಿದ್ದರು.