Sidlaghatta : ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಮಂಗಳವಾರ ಶಿವರಾತ್ರಿ ಆಚರಣೆ ಅಂಗವಾಗಿ ಎಲ್ಲಾ ಶಿವಾಲಯಗಳಲ್ಲೂ ಬೆಳಗ್ಗೆಯಿಂದಲೇ ರುದ್ರಾಭಿಷೇಕದೊಂದಿಗೆ ಪೂಜೆ ನಡೆಯಿತು. ಎಲ್ಲೆಡೆ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಶಿಡ್ಲಘಟ್ಟ ನಗರದ ಪೇಟೆ ನಗರೇಶ್ವರ, ಕೋಟೆ ಸೋಮೇಶ್ವರ, ಕಾಶಿ ವಿಶ್ವನಾಥೇಶ್ವರ, ಅಗ್ರಹಾರ ಬೀದಿಯ ಜಲಕಂಠೇಶ್ವರ ಮತ್ತು ಏಕಾಂಬರೇಶ್ವರ ದೇವಾಲಯಗಳಲ್ಲಿ ರುದ್ರಾಭಿಶೇಕ, ದೇವರಿಗೆ ವಿಶೇಷ ಅಲಂಕಾರ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಶಿವರಾತ್ರಿಯಂದು ಬೆಳಗ್ಗೆ ಸೂರ್ಯಕಿರಣ ಲಿಂಗವನ್ನು ಸ್ಪರ್ಶಿಸುವ ಚೌಡಸಂದ್ರದ ಸೋಮೇಶ್ವರ ದೇಗುಲ, ರಾಮ ಮತ್ತು ಈಶ್ವರ ಒಂದೆಡೆ ನೆಲೆಸಿರುವ ರಾಮಲಿಂಗೇಶ್ವರ ಬೆಟ್ಟ, ಕುಂದಲಗುರ್ಕಿ, ದೇವರಮಳ್ಳೂರು, ಕೊತ್ತನೂರು, ಬಚ್ಚಹಳ್ಳಿ, ನಾಗಮಂಗಲ, ಯಣ್ಣಂಗೂರು, ಭಕ್ತರಹಳ್ಳಿ, ಮೇಲೂರು, ಅಪ್ಪೇಗೌಡನಹಳ್ಳಿ, ಮುತ್ತೂರು, ಹರಳಹಳ್ಳಿ ಮುಂತಾದೆಡೆ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.
ವಿವಿಧ ದೇಗುಲಗಳಲ್ಲಿ ಜಾಗರಣೆಯಿರುವ ಭಕ್ತಾದಿಗಳಿಗೆ ಫಲಾಹಾರ ವಿತರಣೆ, ಭಜನೆ ಏರ್ಪಡಿಸಲಾಗಿತ್ತು.