ಶಿಡ್ಲಘಟ್ಟ ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಬುಧವಾರ ಆಚರಿಸಿದ ಕುವೆಂಪು 117 ರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಕೋಡಿ ರಂಗಪ್ಪ ಮಾತನಾಡಿದರು.
ಕುವೆಂಪು ಯಾವುದೇ ಜಾತಿಗೆ ಸೇರಿದವರಲ್ಲದವರು. ವೈಚಾರಿಕ ಪ್ರಜ್ಞೆಯೊಂದಿಗೆ ಪೂರ್ಣ ಅರಳಿದ ಬದುಕು ಅವರದಾಗಿತ್ತು. ಅನುಭವದ ಆಳಕ್ಕೆ ಇಳಿದು ಕವಿಯಾಗಿ ಜಗತ್ತಿಗೆ ವಿಚಾರಧಾರೆಗಳನ್ನು ಹಂಚುವ ಮೂಲಕ ವಿಶ್ವಕ್ಕೆ ಉತ್ತಮ ಸಂದೇಶಗಳನ್ನು ನೀಡಿ ಮನುಕುಲದಲ್ಲಿ ಅಜರಾಮರಾಗಿ ಉಳಿದದರು. ಅವರು ರಚಿಸಿರುವ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ, ಅವರು ರಚಿಸಿದ ನಾಟಕಗಳು, ಭಾಷಣ ಮತ್ತು ಸಾಹಿತ್ಯ ವಿಮರ್ಶೆ, ಜೀವನ ಚರಿತ್ರೆ, ಕಥೆ ಕಾದಂಬರಿಗಳು ಮತ್ತು ಆತ್ಮ ಕಥನ ನೆನಪಿನ ದೋಣಿಯಲ್ಲಿ ಮುಂತಾದವುಗಳನ್ನು ವಿದ್ಯಾರ್ಥಿಗಳು ಮತ್ತು ಎಲ್ಲಾ ಸಾಹಿತ್ಯಾಸಕ್ತರು ಓದಬೇಕು. ಪ್ರತಿಯೊಬ್ಬರು ವಿಶ್ವಮಾನವರಾಗಬೇಕು ಎಂದು ಅವರು ತಿಳಿಸಿದರು.
ಯಾವ ವ್ಯಕ್ತಿ ಎಲ್ಲಿ ಹೋದರು, ದೈವತ್ವದ ದೃಷ್ಟಿಯಿರಿಸಿಕೊಂಡಿರುತ್ತಾನೋ ಆತ ಮಾತ್ರ ವಿಶ್ವಮಾನವನಾಗಲು ಸಾಧ್ಯ. ಅಂತಹ ವ್ಯಕ್ತಿತ್ವ ಕುವೆಂಪು ಅವರಲ್ಲಿ ಇತ್ತು. ವಿಶ್ವಮಾನವನಾಗಿ ಎಲ್ಲರ ಮನೆ ಮನದಲ್ಲಿ ಉಳಿದುಕೊಂಡಿರುವ ಇಂತಹ ಮಹಾನ್ ಸಂತನನ್ನು ನೆನೆಯುವುದೇ ನಮ್ಮೆಲ್ಲರ ಭಾಗ್ಯ ಎಂದು ಸ್ಮರಿಸಿದರು.
ರಾಷ್ಟ್ರಕವಿ ಕುವೆಂಪು ಅವರ ಬದುಕು ಬರಹದ ಬಗ್ಗೆ ಮಾತನಾಡಿ, ಅನಿಕೇತನ, ಮಲೆನಾಡಿನ ಚಿತ್ರಗಳು, ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು, ನನ್ನ ದೇವರು ಮತ್ತು ಇತರ ಕತೆಗಳು, ಕತೆ, ಕಾದಂಬರಿಗಳನ್ನು ಹೆಸರಿಸಿ ಅದರ ಪರಿಚಯ ಮಾಡಿದರು.
ಪ್ರತಿಯೊಬ್ಬರು ವಿಶ್ವಮಾನವನಾಗಬೇಕು, ವಿದ್ಯಾರ್ಥಿಗಳು ಪುಸ್ತಕ ಪ್ರೀತಿಯನ್ನು ಬೆಳಸಿಕೊಳ್ಳಬೇಕು, ಅಧ್ಯಯನಶೀಲರಾಗಬೇಕು. ಪುಸ್ತಕದ ಮೂಲಕ ಮನುಷ್ಯ ಮರುಹುಟ್ಟನ್ನು ಪಡೆಯಬೇಕು ಎಂದರು.
ರಾಷ್ಟಕವಿ ಕುವೆಂಪು ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಖ್ಯಾತ ಜಾನಪದ ಗಾಯಕ ದೇವರಮಳ್ಳೂರು ಮಹೇಶ್ ಕುಮಾರ್ ರಾಷ್ಟ್ರಕವಿ ಕುವೆಂಪು ರಚಿಸಿದ ಗೀತೆಗಳನ್ನು ಹಾಡಿದರು.
ಡಾಲ್ಫಿನ್ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಚಂದನ ಅಶೋಕ್ ಮತ್ತು, ಮಾಜಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಅಮೃತಕುಮಾರ್ ಕಾರ್ಯಕ್ರಮದಲ್ಲಿ ಮಾತಾಡಿದರು
ಕುವೆಂಪು ರವರು ರಚಿಸಿದ ಗೀತೆಗಳನ್ನು ಹಾಡಿದ ದೇವರಮಳ್ಳೂರು ಮಹೇಶ್ ಕುಮಾರ್ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಲಾಯಿತು.
ಡಾಲ್ಪಿನ್ ವಿದ್ಯಾ ಸಂಸ್ಥೆ ಪ್ರಾಂಶುಪಾಲ ಮುನಿಶಾಮಪ್ಪ, ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ ಎಸ್.ವಿ.ನಾಗರಾಜರಾವ್, ಜಾನಪದ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ವಿ.ಕೃಷ್ಣ, ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.