Sidlaghatta : ಶಿಡ್ಲಘಟ್ಟ ನಗರದ ಬಸ್ ನಿಲ್ದಾಣದಲ್ಲಿ ಸಿಕ್ಕಿದ ಪರ್ಸ್ ಅದರಲ್ಲಿದ್ದ ನಗದು ಸಮೇತ ಮಾಲೀಕರಿಗೆ ಒಪ್ಪಿಸುವ ಮೂಲಕ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಟಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಗುರುವಾರ ಚಿಕ್ಕಬಳ್ಳಾಪುರ ತಾಲ್ಲೂಕಿನ ಜಾತವಾರ ಗ್ರಾಮದಿಂದ ಶಿಡ್ಲಘಟ್ಟ ನಗರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಬಂದ ರೂಪ ಎಂಬ ಮಹಿಳೆ ನಗರದ ಬಸ್ ನಿಲ್ದಾಣದಲ್ಲಿ ಬಸ್ ಇಳಿಯುವ ಸಮಯದಲ್ಲಿ ಹಣ ಇರುವ ಪರ್ಸ್ ಬೀಳಿಸಿಕೊಂಡಿದ್ದರು. ಬಳಿಕ ಕೆಲ ಸಮಯದ ನಂತರ ಪರ್ಸ್ ಇಲ್ಲದಿರುವುದನ್ನು ಅರಿತ ಮಹಿಳೆ ಬಸ್ ನಿಲ್ದಾಣಕ್ಕೆ ಬಂದು ಹುಡುಕಾಡಿದ್ದಾರೆ. ಎಲ್ಲಿಯೂ ತಾನು ಕಳೆದುಕೊಂಡ ಪರ್ಸ್ ಸಿಗದೇ ಇದ್ದಾಗ ಇನ್ನೇನು ಮಾಡುವುದು ಎಂದು ಗಾಬರಿಯಲ್ಲಿದ್ದಾಗ, ಮಹಿಳೆಯ ಮೊಬೈಲ್ ಗೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಂಚಾರ ನಿಯಂತ್ರಕ ಡಿ.ವಿ. ಚಲಪತಿ ಅವರ ಕಡೆಯಿಂದ ನಿಮ್ಮ ಪರ್ಸ್ ಸಿಕ್ಕಿದೆ ಬಂದು ತೆಗೆದುಕೊಳ್ಳಿ ಎಂದು ಕರೆ ಬಂದಿದೆ. ಪರ್ಸ್ ನಲ್ಲಿದ್ದ ಆಧಾರ್ ಕಾರ್ಡ್ ನಲ್ಲಿದ್ದ ಮಹಿಳೆ ಮೊಬೈಲ್ ನಂಬರ್ ನೋಡಿ ಅವರು ಕರೆ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿ ಹಾಗೂ ಕೆ.ಎಸ್.ಆರ್.ಟಿ.ಸಿ ಘಟಕ ವ್ಯವಸ್ಥಾಪಕ ಜೆ.ಗಂಗಾಧರ್ ಸಮ್ಮುಖದಲ್ಲಿ ಮಹಿಳೆಯು ಕಳೆದುಕೊಂಡಿದ್ದ ನಗದು, ಆಧಾರ್ ಕಾರ್ಡ್, ಎಟಿಎಂ, ಪಾನ್ ಕಾರ್ಡ್ ಇದ್ದ ಪರ್ಸ್ ಹಿಂದಿರುಗಿಸಿದ್ದಾರೆ. ಇವರ ಕಾರ್ಯಕ್ಕೆ ಪರ್ಸ್ ಕಳೆದುಕೊಂಡಿದ್ದ ಮಹಿಳೆ ರೂಪ ಧನ್ಯವಾದವನ್ನು ತಿಳಿಸಿದ್ದಾರೆ.