ಕಳೆದ ವರ್ಷ ನಿರೀಕ್ಷೆಗೂ ಮೀರಿ ಮಳೆ ಬಿದ್ದಿದ್ದು ಕೆರೆ ಕುಂಟೆ ತುಂಬಿ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದು ಮುಂದಿನ ಎರಡು ಮೂರು ವರ್ಷಗಳಲ್ಲಿ ಕೃಷಿಗೆ ಅನುಕೂಲ ಆಗಲಿದೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಕೊತ್ತನೂರು ಕೆರೆಗೆ ಶನಿವಾರ ಬಾಗಿನ ಅರ್ಪಣೆ ಮಾಡಿ ಅವರು ಮಾತನಾಡಿದರು. ಭಾರಿ ಮಳೆಗೆ ರೈತರ ಬೆಳೆಗಳು ಹಾಳಾಗಿದ್ದು ಸಾಕಷ್ಟು ನಷ್ಟವಾಗಿದೆ. ಬೆಳೆ ನಷ್ಟವಾದರೂ ಅಂತರ್ಜಲ ಮಟ್ಟ ಹೆಚ್ಚಿದ್ದು ಭವಿಷ್ಯದ ದೃಷ್ಟಿಯಿಂದ ನಾವು ಖುಷಿ ಪಡಬೇಕಿದೆ ಎಂದರು.
ಕೊರೊನಾ, ಕೊರೊನಾ ಲಾಕ್‌ಡೌನ್, ಬೆಳೆ ನಷ್ಟ, ಬೆಲೆ ಕುಸಿತ ಹೀಗೆ ಹತ್ತು ಹಲವು ಸಮಸ್ಯೆಗಳು ರೈತರನ್ನು ಕಾಡುತ್ತಿದ್ದು ರೈತರನ್ನು ಆರ್ಥಿಕವಾಗಿ ಸದೃಡಗೊಳಿಸುವ ಕಾರ‍್ಯಕ್ಕೆ ಸರ್ಕಾರ ಮುಂದಾಗಬೇಕಿದೆ. ಆದಾಯ ದ್ವಿಗುಣವಾಗುವಂತ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಯುವ ಮುಖಂಡ ಎ.ಪಂಚಾಕ್ಷರಿರೆಡ್ಡಿ ಮಾತನಾಡಿ, ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಮೂಲಕ ಶಾಸಕ ವಿ.ಮುನಿಯಪ್ಪ ಅವರಿಗೆ ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ನುಡಿದರು.
ರೈತ ಕುಟುಂಬದಲ್ಲಿ ಹುಟ್ಟಿ ರೈತರ ಸಂಕಷ್ಟವನ್ನು ಅರಿತ ವಿ.ಮುನಿಯಪ್ಪ ಅಂತಹವರು ಈ ಕ್ಷೇತ್ರಕ್ಕೆ ಅಗತ್ಯವಿದ್ದು ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಇವರನ್ನು ಗೆಲ್ಲಿಸಿಕೊಳ್ಳುವ ಹೊಣೆ ನಮ್ಮೆಲ್ಲರದ್ದೂ ಎಂದು ಹೇಳಿದರು.
ಕೊತ್ತನೂರು ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಯಿತು. ಪಂಚಾಕ್ಷರಿರೆಡ್ಡಿ ಅವರು ಹೊಸ ವರ್ಷದ ಅಂಗವಾಗಿ ಸಾಮೂಹಿಕವಾಗಿ ಸಿಹಿ ಊಟ ಮಾಡಿಸಿ ಎಲ್ಲರಿಗೂ ಸಿಹಿ ಹಂಚಿದರು.
ಕೋಚಿಮುಲ್ ನಿರ್ದೆಶಕ ಆರ್.ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಶೀಗೆಹಳ್ಳಿ ವೈ.ಹುಣಸೇನಹಳ್ಳಿ ಎಸ್‌ಎಫ್‌ಸಿಎಸ್ ಬ್ಯಾಂಕ್ ಅಧ್ಯಕ್ಷ ಬಸವರಾಜ್, ಮುಖಂಡರಾದ ಕೊತ್ತನೂರು ಕೆ.ವಿ.ಜಗದೀಶ್‌ರೆಡ್ಡಿ, ಜ್ಞಾನೇಶ್, ಪ್ರಸಾದ್, ಸುನಿತ, ನವೀನ್, ರಾಜಣ್ಣ, ವೇಣುಗೋಪಾಲರೆಡ್ಡಿ, ರತ್ನಮ್ಮಆಂಜಿನಪ್ಪ ಹಾಜರಿದ್ದರು.