Kothanur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಶಿವಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಬಸವೇಶ್ವರ ಸ್ವಾಮಿ ಜಯಂತ್ಯುತ್ಸವವನ್ನು ಮಂಗಳವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ವೀರಭದ್ರ ಸ್ವಾಮಿಯ ವೀರಗಾಸೆ ಕುಣಿತ, ಖಡ್ಗ ಒಡಪುಗಳು, ಭದ್ರಕಾಳಿ ನೃತ್ಯವನ್ನು ಏರ್ಪಡಿಸಲಾಗಿತ್ತು.
ಗ್ರಾಮದಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಸ್ವಾಮಿಯ ಜಯಂತಿಯನ್ನು ಗ್ರಾಮಸ್ಥರು ಪುರಾಣ ಪ್ರಸಿದ್ಧ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಆಚರಿಸಿದರು. ಬಸವೇಶ್ವರರ ಉತ್ಸವ ಮೂರ್ತಿಗೆ ಪೂಜೆ ಮಾಡಿ ಪಲ್ಲಕ್ಕಿ ಉತ್ಸವದಲ್ಲಿ ದೇವರ ಮೆರವಣಿಗೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ, ನಂತರ ಶ್ರೀ ಚೆನ್ನಕೇಶವ ದೇವಾಲಯದ ಆವರಣದಲ್ಲಿ ಮಂಡಲ ಪೂಜೆ ಹಮ್ಮಿಕೊಳ್ಳಲಾಗಿತ್ತು.
“ಶ್ರೀ ಕ್ಷೇತ್ರ ಕೊತ್ತನೂರು ಶ್ರೀ ಶಿವಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಸ್ವಾಮಿ ಜಯಂತೋತ್ಸವವನ್ನು ಬಹಳ ಶ್ರದ್ಧೆ ಭಕ್ತಿ ಪೂರ್ವಕವಾಗಿ ಗ್ರಾಮಸ್ಥರು ಆಚರಿಸುತ್ತಿದ್ದಾರೆ. ಬಸವೇಶ್ವರ ಸ್ವಾಮಿ ಜಯಂತ್ಯುತ್ಸವಕ್ಕೆ ಗ್ರಾಮದ ಶಾಂತಿಗೋಸ್ಕರವಾಗಿ ವೀರಗಾಸೆ ಕುಣಿತ ಹಾಗೂ ಭದ್ರಕಾಳಿ ಕುಣಿತ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಗ್ರಾಮವು ಉತ್ತರೋತ್ತರವಾಗಿ ಅಭಿವೃದ್ಧಿ ಆಗಲಿ ಎಲ್ಲಾ ಕಾರ್ಯಗಳು ಶುಭವಾಗಿ ನಡೆಯಲಿ” ಎಂದು ವೀರಗಾಸೆ ಗಂಗಾಧರ್ ಶುಭ ಹಾರೈಸಿದರು.
ಬಸವೇಶ್ವರ ಸ್ವಾಮಿ ಜಯಂತ್ಯೋತ್ಸವದ ಅಂಗವಾಗಿ ಶಿವಲಿಂಗೇಶ್ವರ ಸ್ವಾಮಿ ದೇವಾಲಯವನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಳಿಸಲಾಗಿತ್ತು. ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನದಾಸೋಹ ಹಾಗೂ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಈ ಸಂದರ್ಭದಲ್ಲಿ. ಕೆ.ಸಿ ಬಸವರಾಜ್, ಕೆ.ಸಿ ವೀರಭದ್ರಯ್ಯ, ಕೆ.ಜಿ.ವೀರಭದ್ರಯ್ಯ, ಮಂಜುನಾಥ, ವಿಜಯಪ್ರಕಾಶ್, ಬಸವರಾಜು, ಚನ್ನಬಸವಯ್ಯ, ಗಂಗಾಧರಯ್ಯ, ಕೆ.ಸಿ ರಾಜಣ್ಣ, ನಾಗರಾಜ್, ಶ್ರೀಧರ್, ಗೌರಿ ಶಂಕರ್, ಮಹೇಶ್, ಚಂದನ್ ಹಾಗೂ ಸಮುದಾಯದ ಮುಖಂಡರು ಹಾಜರಿದ್ದರು.