Jangamakote, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಆಸುಪಾಸಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕೆ.ಐ.ಎ.ಡಿ.ಬಿ ಜಮೀನನ್ನು ಸ್ವಾನಪಡಿಸಿಕೊಳ್ಳಲು ಮುಂದಾಗಿದ್ದು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ಕೊಟ್ಟು ರೈತರನ್ನು ಮಾತನಾಡಿಸಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದರು.
ಜಂಗಮಕೋಟೆ ಹೋಬಳಿ ಕೇಂದ್ರದ ಸುತ್ತಲಿನ 13 ಗ್ರಾಮಗಳ ವ್ಯಾಪ್ತಿಗೆ ಬರುವ ಸರಕಾರಿ ಗೋಮಾಳ, ಕೃಷಿ ಭೂಮಿ ಸೇರಿದಂತೆ ಒಟ್ಟು 1823 ಎಕರೆಯಷ್ಟು ಜಮೀನನ್ನು ಕೈಗಾರಿಕೆಗಳ ಸ್ಥಾಪನೆಗಾಗಿ ಸ್ವಾನಪಡಿಸಿಕೊಳ್ಳಲು ಕೆ.ಐ.ಎ.ಡಿ.ಬಿ ಅಸೂಚನೆ ಹೊರಡಿಸಿದೆ.
ಜಂಗಮಕೋಟೆ ಹೋಬಳಿಯ ಯಣ್ಣಂಗೂರು, ನಡಿಪಿನಾಯಕನಹಳ್ಳಿಯಲ್ಲಿ ಉದ್ದೇಶಿತ ಭೂಸ್ವಾನ ಪ್ರದೇಶಕ್ಕೆ ಭೇಟಿ ಕೊಟ್ಟು ಅಲ್ಲಿನ ರೈತರನ್ನು ಉದ್ದೇಶಿಸಿ ಮಾತನಾಡಿ, ನಾನು ಸಂಸದನಾಗಿ ಇಲ್ಲಿಗೆ ಬಂದಿಲ್ಲ. ನಿಮ್ಮ ಅಣ್ಣ ತಮ್ಮನಾಗಿ ನಿಮ್ಮ ಕಷ್ಟಕ್ಕೆ ನಿಲ್ಲಲು ಬಂದಿದ್ದೇನೆ ಎಂದರು.
ಕೈಗಾರಿಕೆ ಉದ್ದೇಶಕ್ಕೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಿ ನನ್ನದೇನು ತಕರಾರು ಇಲ್ಲ. ಸರ್ಕಾರಿ ಭೂಮಿ, ಗೋಮಾಳ, ಕರಾಬು ಜಮೀನು ಬಿಟ್ಟು ಫಲವತ್ತಾತ ಕೃಷಿ ಜಮೀನು ಸ್ವಾಧೀನಕ್ಕೆ ಮುಂದಾಗಿರುವುದಕ್ಕೆ ನಮ್ಮ ವಿರೋಧವಿದೆ. ಅದಕ್ಕಾಗಿ ನಾನು ಇಲ್ಲಿಗೆ ನಿಮ್ಮೊಂದಿಗೆ ಬಂದಿದ್ದೇನೆ ಎಂದು ಹೇಳಿದರು.
ಈಗಲೂ ಸಹ ರೈತರಲ್ಲಿ ಕೆಲವರಿಗೆ ಕೈಗಾರಿಕೆಗಳು ಸ್ಥಾಪನೆ ಆಗಲಿ ಎನ್ನುವ ಭಾವನೆ ಇದೆ. ಇನ್ನು ಕೆಲವರಿಗೆ ಬೇಡ ಎನ್ನುವ ಅಭಿಪ್ರಾಯವಿದೆ. ನಿಮ್ಮಲ್ಲಿನ ಗೊಂದಲಗಳನ್ನು ನಿವಾರಿಸಿದ ನಂತರವೇ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುತ್ತೇನೆ.
ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇಲ್ಲಿ ಕೈಗಾರಿಕೆಗಳು ಬೇಡ ನಮ್ಮ ಜಮೀನು ನಮಗೆ ಬೇಕು ಎನ್ನುವುದಾದರೆ ಮಾತ್ರವೇ ನಾನು ಈ ಹೋರಾಟವನ್ನು ನಿಮ್ಮೊಂದಿಗೆ ಇದ್ದು ಆರಂಭಿಸುತ್ತೇನೆ, ಬೇಡ ಎನ್ನುವುದಾದರೆ ಬಿಡೋಣ ಇಲ್ಲಿ ಕೈಗಾರಿಕೆಗಳು ಆಗಲಿ ಎಂದು ತಿಳಿಸಿದರು.
ಅಧಿಸೂಚನೆ ಹೊರಡಿಸಿದ ವ್ಯಾಪ್ತಿಯ ಎಲ್ಲ ಜಮೀನುಗಳ ಮಾಲೀಕರ ರೈತರನ್ನು ಗ್ರಾಮವಾರು ಭೇಟಿ ಮಾಡಿ ಕೈಗಾರಿಕೆ ಸ್ಥಾಪನೆಗಾಗಿ ಜಮೀನು ಸ್ವಾಧೀನದ ಪರ ಹಾಗೂ ವಿರೋಧ ಎಷ್ಟು ಮಂದಿ ಇದ್ದಾರೆ ಎಂದು ಪಟ್ಟಿ ಮಾಡಿ ಕೈಗಾರಿಕೆ ಸ್ಥಾಪನೆ ವಿರೋಧಿಸುವವರು ಬಹುಮತ ಇದ್ದರೆ ಮಾತ್ರ ನಾವು ಹೋರಾಟ ಆರಂಭಿಸೋಣ ಎಂದು ಸ್ಥಳೀಯ ನಾಯಕರಿಗೆ ಪರ ವಿರೋಧದ ರೈತರ ಪಟ್ಟಿ ಮಾಡುವಂತೆ ಸೂಚಿಸಿದರು.
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿ, ಕೈಗಾರಿಕೆಗಳ ಸ್ಥಾಪನೆಗಾಗಿ ಫಲವತ್ತಾದ ಕೃಷಿ ಭೂಮಿಗಳನ್ನು ಸ್ವಾನಪಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಇಲ್ಲಿ ರೈತರಿಗೆ ಆಗಬಹುದಾದ ಅನಾಹುತ, ಸ್ಥಿತಿಗತಿಗಳ ಬಗ್ಗೆ ವಿವರಿಸಿದರು.
ಯಣ್ಣಂಗೂರು, ನಡಿಪಿನಾಯಕನಹಳ್ಳಿಯ ಕೆಲ ರೈತರು ನಮಗೆ ಇರುವುದು ಅರ್ಧ ಎಕರೆ ಒಂದು ಒಂದೂವರೆ ಎಕರೆ ಅಷ್ಟೆ. ಸರ್ಕಾರ ಒಂದಷ್ಟು ದುಡ್ಡು ಕೊಡುತ್ತದೆ ನಿಜ. ಆ ದುಡ್ಡನ್ನು ಖರ್ಚು ಮಾಡಿ ಬಿಡುತ್ತೇವೆ, ಮುಂದೆ ನಮ್ಮ ಬದುಕು ಹೇಗೆ ಎಂದು ಪ್ರಶ್ನಿಸಿ ಜಮೀನು ಬಿಟ್ಟುಕೊಟ್ಟರೆ ನಮ್ಮ ಬದುಕು ಸರ್ವನಾಶವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಂ.ರಾಜಣ್ಣ, ಮುಖಂಡರಾದ ಸೀಕಲ್ ರಾಮಚಂದ್ರಗೌಡ, ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ಹೀರೆಬಲ್ಲ ಕೃಷ್ಣಪ್ಪ, ಸ್ಕೂಲ್ ದೇವರಾಜ್, ದಿಬ್ಬೂರಹಳ್ಳಿ ಡಿ.ಎಸ್.ಎನ್. ರಾಜಣ್ಣ, ನಡಿಪಿನಾಯಕನಹಳ್ಳಿ ಅಜಿತ್, ಬಳುವನಹಳ್ಳಿ ರಾಜು, ಶ್ರೀಧರ್, ಮಳ್ಳೂರಯ್ಯ, ಅರಿಕೆರೆ ಮುನಿರಾಜು, ಗ್ಯಾಸ್ ನಾರಾಯಣಸ್ವಾಮಿ, ಮುರಳಿ, ಭರತ್ ಹಾಜರಿದ್ದರು.