Sidlaghatta : KIADB ಗೆ ಜಮೀನು ನೀಡಲು ಸಿದ್ಧತೆಗೊಂಡಿರುವ ರೈತರಿಗೆ ಭೂಮಿಗೆ ಸೂಕ್ತ ಬೆಲೆ, ಒಂದೇ ಕಂತಿನಲ್ಲಿ ಪರಿಹಾರ ಹಾಗೂ ಅವರ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ, ಕೆಐಎಡಿಬಿ ಜಮೀನುಗಳ ರೈತರ ಹೋರಾಟ ಸಮಿತಿಯ ವತಿಯಿಂದ ಬುಧವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಹೋರಾಟ ಸಮಿತಿಯ ಮುಖಂಡ ರಾಮಾಂಜಿ ನೇತೃತ್ವ ವಹಿಸಿ ಮಾತನಾಡುತ್ತಾ, ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ವ್ಯಾಪ್ತಿಯ 2823 ಎಕರೆ ಜಮೀನನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದು, 1200 ರೈತರ ಪೈಕಿ 860 ಕ್ಕೂ ಹೆಚ್ಚು ರೈತರು ಜಮೀನು ನೀಡಲು ಒಪ್ಪಿಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ನಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಈಗಾಗಲೇ ಕೆಐಎಡಿಬಿ ಹೆಸರು ನಮೂದಿಸಿರುವುದರಿಂದ, ನಾವು ಯಾವುದೇ ಬ್ಯಾಂಕಿನಲ್ಲಿ ಸಾಲ ಪಡೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ, ಆದಷ್ಟು ಬೇಗ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ರೈತರಿಗೆ ಸರಿಯಾದ ಬೆಲೆಯೊಂದಿಗೆ ಒಂದೇ ಕಂತಿನಲ್ಲಿ ಭೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಭೂ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುವವರು ತಮ್ಮ ಭೂಮಿ ನೀಡದಿರಬಹುದು, ಆದರೆ ಜಮೀನು ನೀಡಲು ಸಿದ್ಧರಿರುವ ರೈತರ ಕುರಿತು ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಸ್ಪಷ್ಟಪಡಿಸಿದರು.
ನಿಮ್ಮಗಿಷ್ಟವಿಲ್ಲದಿದ್ದರೆ ನಿಮ್ಮ ಭೂಮಿ ಕೊಡಬೇಡಿ, ನಮ್ಮ ಭೂಮಿ ಕೊಡುವುದು, ಬಿಡುವುದು ನಮಗೆ ಸೇರಿದ್ದು, ಇದರಲ್ಲಿ ಬೇರೆಯವರ ಜೋಕು ಬೇಕಾಗಿಲ್ಲ ಎಂದು ರೈತರು ಸ್ಪಷ್ಟನೆ ನೀಡಿದರು.
ಪ್ರತಿಭಟನೆಯಲ್ಲಿಂದು, ಭೂಮಿ ನೀಡಲು ಒಪ್ಪಿಕೊಂಡಿರುವ ರೈತರ ಕುಟುಂಬದವರಿಗೆ ಉದ್ಯೋಗ, ಭೂಮಿಗೆ ಉತ್ತಮ ಬೆಲೆ, ಈಗಾಗಲೇ ನಮೂನೆ 51, 53, 57 ಅರ್ಜಿ ಸಲ್ಲಿಸಿರುವ ರೈತರಿಗೂ ಭೂ ಪರಿಹಾರ ಹಾಗೂ ಕೆಐಎಡಿಬಿಯಿಂದ ನೋಟೀಸ್ ಬಾರದ ನಡಿಪಿನಾಯಕನಹಳ್ಳಿ ಮತ್ತು ಯಣ್ಣಂಗೂರು ಗ್ರಾಮದ ರೈತರಿಗೆ ತುರ್ತಾಗಿ ನೋಟೀಸ್ ಜಾರಿ ಮಾಡಬೇಕೆಂದು ಒತ್ತಾಯಿಸಿ, ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಆಶ್ವಿನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಮುಖಂಡರು, ರೈತ ಸಂಘಗಳ ಪ್ರಮುಖರು ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.