Sidlaghatta : ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಎ.ಆರ್.ಎಂ ಪಿಯು ಕಾಲೇಜಿನಲ್ಲಿ ಮಂಗಳವಾರ ರಾಷ್ಟ್ರಕವಿ ಕುವೆಂಪು ಕುರಿತು “ಕವಿಯ ನೆನೆದು ಕವಿತೆ” ಕೇಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು
ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಅವರು ಕುವೆಂಪು ಅವರನ್ನು ಪರಿಚಯಿಸಿದರೆ, ಗಾಯಕ ದೇವರಮಳ್ಳೂರು ಮಹೇಶ್, ಕುವೆಂಪು ಅವರ ಗೀತೆಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಇಪ್ಪತ್ತನೇ ಶತಮಾನದ ಬಹು ದೊಡ್ಡ ಕನ್ನಡ ಸಾಹಿತ್ಯ ಶಿಖರ ರಾಷ್ಟ್ರಕವಿ ಕುವೆಂಪು. ವೈಜ್ಞಾನಿಕ ಮನೋಭಾವದ ಪ್ರತಿಪಾದನೆ, ಪುರೋಹಿತಶಾಹಿ ವಿರುದ್ಧದ ಪ್ರತಿಭಟನೆ, ಸೃಜನಶೀಲತೆಯ ಬಗೆಗೆ ಗಾಢ ನಂಬಿಕೆ, ಎಲ್ಲ ಬಗೆಯ ಧಾರ್ಮಿಕ ಮೂಲಭೂತವಾದದ ಬಗೆಗೆ ಅಸಹನೆ, ಶ್ರಮಸಂಸ್ಕೃತಿಯ ಬಗೆಗಿನ ಆಸ್ಥೆ – ಇವು ಕುವೆಂಪು ಅವರ ಕಾವ್ಯದ ಪ್ರಧಾನ ಆಶಯಗಳು. ಕುವೆಂಪು ಆಧುನಿಕ ಸಂದರ್ಭದ ಶ್ರೇಷ್ಠ ಲೇಖಕರಷ್ಟೇ ಅಲ್ಲ, ಸಾಮಾಜಿಕ ಚಿಂತಕರೂ ಹೌದು ಎಂದು ಹೇಳಿದರು.
ವರಕವಿ ಬೇಂದ್ರೆಯವರಿಂದ “ಯುಗದ ಕವಿ ಜಗದ ಕವಿ” ಎನಿಸಿಕೊಂಡ ಕುವೆಂಪು, ವಿಶ್ವಮಾನವ ಸಂದೇಶ ನೀಡಿದವರು. ಅವರ ಕಾವ್ಯ ಸಾರ್ವಕಾಲಿಕವಾದುದು ಎಂದರು.
ಎ.ಆರ್.ಎಂ.ಪಿಯು ಕಾಲೇಜಿನ ಪ್ರಾಂಶುಪಾಲ ಕೆ.ಮೂರ್ತಿ ಸಾಮ್ರಾಟ್ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ಕಸಾಪ ಕನ್ನಡದ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸುತ್ತದೆ. ಕವಿ ಕಾವ್ಯ ಪರಿಚಯ ಕಾರ್ಯಕ್ರಮದ ಮೂಲಕ ಈ ದಿನ ರಾಷ್ಟ್ರಕವಿ ಕುವೆಂಪು ರವರ ಸಾಹಿತ್ಯದ ಕೊಡುಗೆ, ಸಾಧನೆಗಳು ಮತ್ತು ಅವರು ರಚಿಸಿರುವ ಗೀತೆಗಳನ್ನು ಕೇಳುವ ಸುಸಂದರ್ಭ ಒದಗಿ ಬಂದಿದೆ ಎಂದರು.
ಬಾರಿಸು ಕನ್ನಡ ಡಿಂಡಿಮವ, ಎಲ್ಲಾದರು ಇರು ಎಂತಾದರು ಇರು , ಓ ನನ್ನ ಚೇತನ , ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ, ನೂರು ದೇವರನ್ನೆಲ್ಲ ನೂಕಾಚೆ ದೂರ ಮುಂತಾದ ಗೀತೆಗಳನ್ನು ಗಾಯಕ ದೇವರಮಳ್ಳೂರು ಮಹೇಶ್ ಹಾಡಿದರು.
ಕಸಾಪ ಮತ್ತು ಎಆರ್ ಎಂಪಿಯು ಕಾಲೇಜಿನ ವತಿಯಿಂದ ಗಾಯಕ ದೇವರಮಳ್ಳೂರು ಮಹೇಶ್ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ನಿ.ಪೂ.ಅಧ್ಯಕ್ಷ ಎ.ಎಂ.ತ್ಯಾಗರಾಜ್, ಪ್ರಾಂಶುಪಾಲ ಕೆ.ಮೂರ್ತಿ ಸಾಮ್ರಾಟ್, ಉಪನ್ಯಾಸಕರಾದ ವಿ.ದೇವರಾಜ ಅರಸ್, ಸಿ.ನಾಗೇಶ್ ಮೌರ್ಯ, ಕಲ್ಯಾಣ್, ಶ್ರೀಧರ್ ಮೂರ್ತಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.