Appegowdanahalli, Sidlaghatta : ಹರಿದು ಹಂಚಿ ಹೋದ ಕನ್ನಡ ಸಂಸ್ಕೃತಿಯನ್ನು ಹೊಂದಿದ್ದ ಭೂಭಾಗಗಳು, ಕನ್ನಡ ಮಾತನಾಡುವ ಜನರನ್ನ ಒಂದೇ ಆಳ್ವಿಕೆಯಡಿಯಲ್ಲಿ ಅಂದರೆ ಕನ್ನಡ ಧ್ವಜದ ಪರಿಕಲ್ಪನೆಯ ಅಡಿಯಲ್ಲಿ ಒಗ್ಗೂಡಿಸುವ ಸಲುವಾಗಿ ಪ್ರಾರಂಭಗೊಂಡ ಹೋರಾಟವೇ ಕರ್ನಾಟಕ ಏಕೀಕರಣದ ಹೋರಾಟ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ “ಕರ್ನಾಟಕ ಏಕೀಕರಣ ಇತಿಹಾಸದ ಪ್ರಮುಖ ಘಟನೆಗಳು ಮತ್ತು ಹೋರಾಟಗಾರ ಪಾತ್ರ” ಎಂಬ ವಿಷಯದ ಬಗ್ಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಆಲೂರು ವೆಂಕಟರಾಯರನ್ನು ಕರ್ನಾಟಕ ಏಕೀಕರಣದ ಶಿಲ್ಪಿ ಎಂದು ಕರೆಯಲಾಗುತ್ತದೆ. ಅವರು ಆರಂಭಿಸಿದ ಕರ್ನಾಟಕ ಗತ ವೈಭವ, ವಾಗ್ಭುಷಣ ಪತ್ರಿಕೆ ಕನ್ನಡಿಗರಲ್ಲಿ ಏಕೀಕರಣಕ್ಕೆ ಪ್ರೇರೇಪಣೆಯಾಯಿತು. ಕನ್ನಡ ಭಾಷೆ ಶಿಕ್ಷಣ ಮಾಧ್ಯಮವಾಗಿ ಕನ್ನಡಿಗರಲ್ಲಿ ಜಾಗೃತಿ ಮೂಡಲು ಕಾರಣವಾದುದು ಒಂದೆಡೆಯಾದರೆ, ಇನ್ನೊಂದೆಡೆ, ಕರ್ನಾಟಕದ ಇತಿಹಾಸ, ಸಾಹಿತ್ಯ, ಸಂಸ್ಕೃತಿಯನ್ನು ಕನ್ನಡಿಗರಲ್ಲಿ ಅಭಿಮಾನ ಹೆಚ್ಚಿಸುವ ಸಲುವಾಗಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾಯಿತು ಎಂದು ವಿವರಿಸಿದರು.
ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗವಹಿಸಿದ ಪ್ರಮುಖ ಹೋರಾಟಗಾರರು ಎಸ್.ನಿಜಲಿಂಗಪ್ಪ , ಎಸ್.ಆರ್. ಬೊಮ್ಮಾಯಿ , ಸಿದ್ದಪ್ಪ ಕಂಬಳಿ ,ಹುಯಿಲ ಗೋಳ ನಾರಾಯಣರಾವ್ , ಶಾಂತವೇರಿ ಗೋಪಾಲಗೌಡರು , ಕುವೆಂಪು ,ಬಿ.ಎಂ.ಶ್ರೀ , ಡೆಪ್ಯುಟಿ ಚನ್ನಬಸಪ್ಪ , ಆಚಾರ್ಯ ,ಕೆಂಗಲ್ ಹನುಮಂತಯ್ಯ , ಪಾಟೀಲ ಪುಟ್ಟಪ್ಪ , ಕೋ.ಚನ್ನಬಸಪ್ಪ , ಹಾರನಹಳ್ಳಿ ರಾಮಸ್ವಾಮಿ , ಗೊರೂರು ರಾಮಸ್ವಾಮಿ ಅಯ್ಯಂಗಾರ್ , ಎಚ್.ಕೆ. ಮರಿಯಪ್ಪ , ಅನಕೃ , ವೀರನಗೌಡ , ಚೆನ್ನಯ್ಯ , ಬಿ.ಎಸ್.ಕಕ್ಕಿಲಾಯ , ರಂಗರಾವ್ ಇನ್ನೂ ಮುಂತಾದವರು ಎಂದು ಹೇಳಿದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ 10 ನೇ ತರಗತಿಯ ಚೇತನ್ ಸಿ.ಕೆ (ಪ್ರಥಮ ), ನಿರ್ಮಲ.ಎಂ (ದ್ವಿತೀಯ), ಕೀರ್ತನ. ಪಿ.ವೈ (ತೃತೀಯ ) ಹಾಗೂ 9ನೇ ತರಗತಿಯ ಕಲಾನಿಧಿ. ಎಸ್.ಎನ್ (ಪ್ರಥಮ ), ಲಿಖಿತ ಎಸ್.ಎನ್ (ದ್ವಿತೀಯ ), ದೀಕ್ಷಿತ್.ಎಸ್, ಸ್ವಾತಿ ಎ.ಎಸ್ (ತೃತೀಯ ) ಅವರಿಗೆ ಕಸಾಪ ವತಿಯಿಂದ ಪುಸ್ತಕ, ಪ್ರಮಾಣಪತ್ರ ಮತ್ತು ಲೇಖನ ಸಾಮಗ್ರಿಗಳನ್ನು ನೀಡಿ ಅಭಿನಂದಿಸಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಿ.ಪೂ.ಅಧ್ಯಕ್ಷ ಎ.ಎಂ.ತ್ಯಾಗರಾಜ್ , ಇಂದಿರಾಗಾಂಧಿ ವಸತಿ ಶಾಲೆ ಶಿಕ್ಷಕರಾದ ಸಿ.ಎ.ಪ್ರಸಾದ್, ಮುರಳೀಧರ , ದಿವಾಕರ್ ರೆಡ್ಡಿ, ಶಶಿ ದೀಪಿಕಾ, ಮಂಜುಳ, ಲಕ್ಷ್ಮೀ ನಾರಾಯಣ , ನರೇಶ್ , ಕವಿತ ,ಯಶೋದ , ತುಳಸಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.