ಕನ್ನಡವನ್ನು ಉಳಿಸಿ ಬೆಳೆಸಲು ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವುದು ಅತ್ಯವಶ್ಯ ಎಂದು ಮನಗಂಡು ಕಸಾಪ ಶಿಡ್ಲಘಟ್ಟ ತಾಲ್ಲೂಕು ಘಟಕ ಕನ್ನಡ ಭಾಷೆ, ಸಂಸ್ಕೃತಿ, ವಿಚಾರ, ಸಾಧಕರ ಪರಿಚಯವನ್ನು ಆನ್ ಲೈನ್ ಮೂಲಕ ಮಾಡಲು ಹೊರಟಿರುವುದು ಅನುಕರಣೀಯ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಸಾಪ ಶಿಡ್ಲಘಟ್ಟ ತಾಲ್ಲೂಕು ಘಟಕದ ಚಟುವಟಿಕೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಪ್ರಚುರಪಡಿಸುವ “ಬ್ಲಾಗ್” ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ಭವ್ಯವಾದ ಪರಂಪರೆಯಿದೆ. ಹಾಗೆಯೇ ಅದನ್ನು ಭವಿಷ್ಯಕ್ಕೆ ತಂತ್ರಾಂಶದೊಂದಿಗೆ ಕೊಂಡೊಯ್ಯಬೇಕಾದ ಅನಿವಾರ್ಯತೆಯೂ ಇದೆ. ಒಂದು ಭಾಷೆಯ ಅಳಿವು ಉಳಿವನ್ನು ನೇರವಾಗಿ ನಿರ್ಧರಿಸುವುದು ಅದರ ಜನಬಳಕೆ. ಜನ ಬಳಸುವುದು ಕಡಿಮೆಯಾಗುತ್ತ ಬಂದಂತೆ ಆ ಭಾಷೆ ಅವಸಾನಕ್ಕೆ ಹತ್ತಿರವಾಗುತ್ತದೆ. ಈಗಿನ ಯುವಜನರನ್ನು ಕನ್ನಡ ಸಂಸ್ಕೃತಿಯೊಂದಿಗೆ ಕರೆದೊಯ್ಯಲು ತಂತ್ರಜ್ಞಾನವನ್ನು ಬಳಸಿಕೊಳ್ಳಲೇಬೇಕಿದೆ. ಕಸಾಪ ಕೂಡ ಈ ನಿಟ್ಟಿನಲ್ಲಿ ಬೆಳೆಯುತ್ತಿರುವುದು ಸಂತಸ ತಂದಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ಮಾತನಾಡಿ, ತಂತ್ರಜ್ಞಾನದ ವಿಸ್ತಾರ ಅನಂತವಾದದ್ದು. ಆನ್ ಲೈನ್ ಮೂಲಕ ಮಾಡುವ ಕಾರ್ಯಕ್ರಮದಲ್ಲಿ ಇಂದು ಪ್ರಪಂಚದ ಯಾವುದೇ ಭಾಗದ ಕನ್ನಡಿಗರೂ ಭಾಗವಹಿಸಬಹುದಾದ ಸಾಧ್ಯತೆಯಿದೆ. ಕನ್ನಡವನ್ನು ಮಾಹಿತಿ ಮತ್ತು ತಂತ್ರಜ್ಞಾನ ರಂಗದಲ್ಲಿ ಬಳಸದೆ ಹೋದರೆ ಕನ್ನಡ ನಶಿಸಿಹೋಗುತ್ತದೆ ಎಂಬ ತೇಜಸ್ವಿಯವರ ಅಭಿಪ್ರಾಯವನ್ನು ನಾವು ಪರಿಗಣಿಸಿದ್ದೇವೆ. ಶಿಡ್ಲಘಟ್ಟ ಕಸಾಪ ಕೂಡ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಕನ್ನಡ ಭಾಷೆ, ಸಂಸ್ಕೃತಿ ಪಸರಿಸುವ ಕೆಲಸ ಮಾಡಲಿದೆ. ನಮ್ಮ ಜಿಲ್ಲೆಯ ಸಾಧಕರು, ಸಾಹಿತಿಗಳು ಸೇರಿದಂತೆ ನಾಡಿನ ಖ್ಯಾತ ನಾಮರು ಭಾಗವಹಿಸುವರು ಎಂದು ಹೇಳಿದರು.
ಕಸಾಪ ಶಿಡ್ಲಘಟ್ಟ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ಕಸಾಪ ವತಿಯಿಂದ ಕಾರ್ಯಕ್ರಮಗಳನ್ನು ನಡೆಸಿ ಡಿಜಿಟಲ್ ತಂತ್ರಜ್ಞಾನದ ಮೂಲಕ ಪ್ರಪಂಚದ ಎಲ್ಲಾ ಭಾಗಕ್ಕೂ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ಬ್ಲಾಗ್, ಪೋಡ್ ಕಾಸ್ಟ್ ಮತ್ತು ಆನ್ ಲೈನ್ ಲೈನ್ ವೇದಿಕೆ ಮುಖಾಂತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಆನ್ ಲೈನ್ ಮೂಲಕ ತಮ್ಮ ವಿಚಾರಗಳನ್ನು ಮಂಡಿಸಲು ಈಗಾಗಲೇ ನೂರಕ್ಕೂ ಹೆಚ್ಚು ವಿಷಯ ತಜ್ಞರು ಒಪ್ಪಿದ್ದಾರೆ. ಈಗಾಗಲೇ ಆನ್ ಲೈನ್ ನಲ್ಲಿ ಕವನಗಳನ್ನು ನಮ್ಮ ರಾಜ್ಯದ ನಾನಾ ಭಾಗಗಳಿಂದ ಸ್ವೀಕರಿಸಿದ್ದೇವೆ. ಕವಿಗಳಿಗೆ ಪ್ರಶಂಸಾ ಪತ್ರವನ್ನು ನೀಡಲಿದ್ದೇವೆ ಎಂದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಅಮೃತಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್, ಅಜಿತ್ ಕೌಂಡಿನ್ಯ, ಗಾಯಕ ಭಕ್ತರಹಳ್ಳಿ ನಾಗೇಶ್ ಹಾಜರಿದ್ದರು.