Sidlaghatta : ಶ್ರೀ ಪೂಜಮ್ಮ ದೇವಿಯ ಕರಗ ಮಹೋತ್ಸವವನ್ನು ಎಂದಿನಂತೆ ಸಂಪ್ರದಾಯ ಬದ್ದವಾಗಿ ಆಚರಿಸಿ, ಆದರೆ ಚುನಾವಣೆಯ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡದಂತೆ ಕರಗ ಮಹೋತ್ಸವದ ಸಂಘಟಕರು, ಮುಖ್ಯಸ್ಥರು ಎಚ್ಚರಿಕೆವಹಿಸಿ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಶ್ರೀನಿವಾಸ್ ತಿಳಿಸಿದರು.
ನಗರದಲ್ಲಿನ ದಿಬ್ಬೂರಹಳ್ಳಿ ಬೈಪಾಸ್‌ನ ಶ್ರೀಪೂಜಮ್ಮ ದೇವಿಯ ಕರಗ ಮಹೋತ್ಸವವು ಮಾರ್ಚ್ 22 ರಿಂದ 25 ರವರೆಗೂ ನಡೆಯಲಿರುವ ಹಿನ್ನಲೆಯಲ್ಲಿ ತಮ್ಮ ಕಚೇರಿಯಲ್ಲಿ ಕರಗ ಮಹೋತ್ಸವದ ಮುಖ್ಯಸ್ಥರು, ದೇವಾಲಯದ ಭಕ್ತರು, ಸಿದ್ದಾರ್ಥ ನಗರ ಸೇರಿದಂತೆ ನಗರದ ನಾಗರಿಕರ ಶಾಂತಿ ಸಭೆ ನಡೆಸಿ ಅವರು ಮಾತನಾಡಿದರು.
ನಾಲ್ಕು ದಿನಗಳ ಕಾಲ ಕರಗ ಮಹೋತ್ಸವದ ನಾನಾ ಧಾರ್ಮಿಕ ಕಾರ್ಯಗಳು, ಪೂಜೆ ಪುನಸ್ಕಾರ, ಹೋಮ ಹವನ ಹಾಗೂ ಹಸಿ ಕರಗ ಮತ್ತು ಹೂವಿನ ಕರಗ ಮಹೋತ್ಸವ, ಸಾರ್ವಜನಿಕವಾಗಿ ನಡೆಯುವ ರಸ ಸಂಜೆ ಕಾರ್ಯಕ್ರಮದ ಬಗ್ಗೆ ಪೂರ್ಣ ಮಾಹಿತಿ ಪಡೆದರು.
ಎಂದಿನಂತೆ ಪೂಜೆ ಪುನಸ್ಕಾರ ಕರಗ ಮಹೋತ್ಸವ ನಡೆಸಿಕೊಳ್ಳಿ, ಸಂಬಂದಿಸಿದಂತೆ ಚುನಾವಣಾ ಶಾಖೆಯಿಂದ ಅನುಮತಿ ಪಡೆದುಕೊಳ್ಳಿ, ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡದಂತೆ ಎಚ್ಚರಿಕೆವಹಿಸಿ ಕಾರ್ಯಕ್ರಮ ನಡೆಸಿ ಎಂದು ಆಯೋಜಕರಿಗೆ ಸೂಚಿಸಿದರು.