ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ರಾಷ್ಟೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಂದ ಏರ್ಪಡಿಸಲ್ಪಟ್ಟ ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿ ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್ ಮಾತನಾಡಿದರು.
ಸರ್ ಸಿ.ವಿ.ರಾಮನ್ ಅವರ ರಾಮನ್ ಪರಿಣಾಮ ಎಂಬ ಸಂಶೋಧನೆಯ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಗುತ್ತಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವಿಜ್ಞಾನದೆಡೆಗೆ ಆಸಕ್ತಿಯನ್ನು ಮೂಡಿಸುತ್ತವೆ ಎಂದು ಅವರು ತಿಳಿಸಿದರು.
“ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಯೋಜಿತ ನಡೆ” 2022ರ ರಾಷ್ಟ್ರೀಯ ವಿಜ್ಞಾನ ದಿನದ ವಿಷಯವಾಗಿದೆ. ವಿದ್ಯಾರ್ಥಿಗಳು ವಿಜ್ಞಾನದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಬೇಕು. ಮೂಲ ವಿಜ್ಞಾನಕ್ಕೆ ಆದ್ಯತೆ ನೀಡಬೇಕು. ವಿಜ್ಞಾನ ದಿನದ ಅರ್ಥಪೂರ್ಣತೆ ಇರುವುದು ಆಚರಣೆಗಿಂತಲೂ ಮಿಗಿಲಾಗಿ ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳುವುದರಿಂದ ಎಂದು ಹೇಳಿದರು.
ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಊರಿನ ಮುಖಂಡರು, ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಯುವಕರು ಆಗಮಿಸಿ ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು. ವಿದ್ಯಾರ್ಥಿಗಳು ವಿಜ್ಞಾನ ಪ್ರಯೋಗಗಳು ಮತ್ತು ಮಾದರಿಗಳನ್ನು ವೀಕ್ಷಿಸಲು ಬಂದವರಿಗೆ ತೋರಿಸಿ ವಿವರಣೆ ನೀಡಿದರು.
ವಸ್ತು ಪ್ರದರ್ಶನದಲ್ಲಿ ಟ್ರಾಫಿಕ್ ಸಿಗ್ನಲ್, ಸೌರಮಂಡಲ ಮಾದರಿ, ವಾಯುಮಂಡಲ ಮಾದರಿ, ಜೆ. ಸಿ. ಬಿ. ಮಾದರಿಗಳು, ವಾಹಕಗಳು ಮತ್ತು ಅವಾಹಕಗಳ ಮಾದರಿ ಪ್ರದರ್ಶಿಸಿದ್ದರು.
ಮುಖ್ಯ ಶಿಕ್ಷಕ ಶೀನಿವಾಸ್ ಯಾದವ್, ಶಿಕ್ಷಕ ಕೆ. ಶಿವಶಂಕರ, ವಿಜ್ಞಾನ ಶಿಕ್ಷಕಿ ಸುನೀತಾ, ಅಂಗನವಾಡಿ ಶಿಕ್ಷಕಿ ಪದ್ಮಾವತಿ ಭಾಗವಹಿಸಿದ್ದರು.