Sidlaghatta : ಕನ್ನಡ ಭಾಷೆ, ಸಾಹಿತ್ಯ, ನೆಲ, ಜಲ, ಸಂಸ್ಕೃತಿ ನಮ್ಮ ನಿಮ್ಮೆಲ್ಲರ ಬದುಕಿನ ಭಾಗವಾಗಬೇಕು. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಕೆಲಸ ಮತ್ತು ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ಶ್ರೀನಗರೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ನ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡವು ಕೇವಲ ಭಾಷೆ ಮಾತ್ರವಲ್ಲ. ಅದು ಬದುಕನ್ನು ಕಟ್ಟಿಕೊಳ್ಳುವ ಮಾಧ್ಯಮ. ನಮ್ಮಯ ಉಸಿರು. ಜಗತ್ತಿನೊಂದಿಗೆ ನಮ್ಮನ್ನು ಇದು ಬೆಸೆಯುತ್ತದೆ. ಹಾಗಾಗಿ ಕನ್ನಡ ಭಾಷೆಯ ಉಳಿವು ಬೆಳವಣಿಗೆಯೊಂದಿಗೆ ಕನ್ನಡಿಗರಾದ ನಮ್ಮ ಬದುಕು ಕೂಡ ಹಸನಾಗಲಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ನಿರಂತರವಾಗಿ ಕಾರ್ಯಕ್ರಮಗಳನ್ನು ರೂಪಿಸುವ ಕೆಲಸ ಮಾಡಬೇಕು. ಗಡಿಭಾಗದಲ್ಲಿ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಕಲಿಯುವಂತಾಗಬೇಕು, ಜಾಗೃತಿ ಮೂಡಬೇಕೆಂದರು.
ಸಾಹಿತ್ಯ ಪರಿಷತ್ ನ ಎಲ್ಲ ಚಟುವಟಿಕೆಗಳಿಗೂ ನನ್ನ ಬೆಂಬಲ ನೆರವು ಇರಲಿದೆ. ನನಗೆ ಈ ಕ್ಷೇತ್ರದ ಜನರು ಆಶೀರ್ವದಿಸಿದ್ದು ಸಿಕ್ಕ ಅಧಿಕಾರವನ್ನು ಕ್ಷೇತ್ರದ ಜನ ಸಾಮಾನ್ಯರಿಗೆ ಉಚಿತ ಆರೋಗ್ಯ, ಉಚಿತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ ನ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಅವರಿಗೆ ನಿಕಟ ಪೂರ್ವ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜವನ್ನು ಹಸ್ತಾಂತರಿಸುವ ಮೂಲಕ ಪದಾಧಿಕಾರಿಗಳ ಪದಗ್ರಹಣ ನೆರವೇರಿತು.
ಎಸ್.ಎಸ್.ಎಲ್.ಸಿ ಯ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಪೂರ್ಣಾಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ, ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜ್‌ರಾವ್, ತಾದೂರು ರಘು, ರೈತ ಸಂಘದ ಬಿ.ನಾರಾಯಣಸ್ವಾಮಿ, ಮುನಿಕೆಂಪಣ್ಣ, ತಾದೂರು ಮಂಜುನಾಥ್, ಮುನಿನಂಜಪ್ಪ, ಜೆ.ಎಸ್.ವೆಂಕಟಸ್ವಾಮಿ, ಕೆಂಪಣ್ಣ, ಶಿವಶಂಕರ್, ವಿ.ಕೃಷ್ಣ, ಟಿ.ವಿ.ಚಂದ್ರಶೇಖರ್ ಹಾಜರಿದ್ದರು.