ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಬಿ.ಆರ್.ಅನಂತಕೃಷ್ಣ ಅವರನ್ನು ಆಯ್ಕೆ ಮಾಡಿದ್ದು, ಕನ್ನಡವನ್ನು ಕಟ್ಟುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತರುವ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕೋಡಿರಂಗಪ್ಪ ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕೋಡಿರಂಗಪ್ಪ ಅವರ ವಿವೇಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಡ್ಲಘಟ್ಟ ತಾಲ್ಲೂಕು ಕಸಾಪ ನೂತನ ಅಧ್ಯಕ್ಷರ ಹೆಸರನ್ನು ಘೋಷಿಸಿ ಅವರು ಮಾತನಾಡಿದರು.
ಈ ಹಿಂದೆ 2016-17 ರಲ್ಲಿ ಶಿಡ್ಲಘಟ್ಟ ತಾಲ್ಲೂಕು ಕಸಾಪ ಅಧ್ಯಕ್ಷರಾಗಿ ಬಿ.ಆರ್.ಅನಂತಕೃಷ್ಣ ಅವರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಸಾಧಕರನ್ನು ಕರೆತಂದು ವಿಭಿನ್ನ, ವಿನೂತನ ಕನ್ನಡ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಶಾಲಾ ಕಾಲೇಜು ಗ್ರಂಥಾಲಯಗಳಿಗೆ ಮತ್ತು ಕಾರ್ಯಕ್ರಮಗಳಲ್ಲಿ ಬಹುಮಾನವಾಗಿ ಪುಸ್ತಕಗಳನ್ನು ಕೊಟ್ಟು ಕನ್ನಡ ಪ್ರೇಮವನ್ನು ಪಸರಿಸಿದ್ದಾರೆ. ಅವರ ಕನ್ನಡಾಭಿಮಾನ, ಕಾರ್ಯಕ್ಷಮತೆಯನ್ನು ಪರಿಗಣಿಸಿ ಶಿಡ್ಲಘಟ್ಟ ತಾಲ್ಲೂಕು ಕಸಾಪ ಜವಾಬ್ದಾರಿಯನ್ನು ವಹಿಸಿದ್ದೇವೆ. ಅವರು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತರಲಿ ಎಂದರು.
ಶಿಡ್ಲಘಟ್ಟ ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮತ್ತು ಜಿಲ್ಲಾ ಕಸಾಪ ಅಧ್ಯಕ್ಷ ಕೋಡಿರಂಗಪ್ಪ ಅವರಿಂದ ಪರಿಷತ್ ಬಾವುಟವನ್ನು ಪಡೆದ ಬಿ.ಆರ್.ಅನಂತಕೃಷ್ಣ ಅವರು ಮಾತನಾಡಿ, ನಾನು ಮತ್ತು ನನ್ನ ತಂಡ ಕ್ರಿಯಾಶೀಲವಾಗಿ ಕನ್ನಡ ಸೇವೆ ಮಾಡಿ ಶಿಡ್ಲಘಟ್ಟ ತಾಲ್ಲೂಕು ಕಸಾಪ ಮತ್ತು ಜಿಲ್ಲಾ ಕಸಾಪಗೆ ಗೌರವ ತರುವ ಕೆಲಸ ಮಾಡುತ್ತೇವೆ. ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸುವ ಕಾರ್ಯಕ್ರಮ, ಕವಿ ಕಾವ್ಯ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಸುವುದು, ವಿದ್ಯಾರ್ಥಿಗಳಿಗೆ ಸಾಧಕರ ಪರಿಚಯ ಮಾಡಿಸುವುದು ವಿವಿಧ ಕ್ಷೇತ್ರದ ಸಾಧಕರಿಂದ ಮಾರ್ಗದರ್ಶನ ಮಾಡಿಸುವುದು ಮತ್ತು ಸಂವಾದ ಏರ್ಪಡಿಸುವುದು. ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮದ ಮೂಲಕ ಲೇಖಕರ ಪರಿಚಯ ಮತ್ತು ಅವರ ಕೃತಿ ಪರಿಚಯ ಮಾಡಿಸುವುದು. ವಿವಿಧ ಕಾರ್ಯಾಗಾರವನ್ನು ಆಯೋಜಿಸುವುದು. ಪುಸ್ತಕ ಬಿಡುಗಡೆ, ಯೋಧ ನಮನ ಕಾರ್ಯಕ್ರಮ ಆಯೋಜಿಸುವುದು. ಭಾಷೆಯ ಬಗ್ಗೆ ಅಭಿಮಾನವುಳ್ಳ ಯುವ ಸಮುದಾಯವನ್ನು ಪರಿಷತ್ತಿಗೆ ಕರೆತರುವುದು ಮತ್ತು ಅವರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಮಾಡಲಾಗುವುದು ಎಂದರು.
ಚಿಕ್ಕಬಳ್ಳಾಪುರ ತಾಲ್ಲೂಕು ಕಸಾಪ ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೈ.ಎಲ್.ಹನುಂತರಾವ್, ಪ್ರಧಾನ ಕಾರ್ಯದರ್ಶಿ ಎಸ್.ಎನ್.ಅಮೃತ್ ಕುಮಾರ್, ಎ.ಎಂ.ತ್ಯಾಗರಾಜ್, ಸರ್ದಾರ್ ಚಾಂದ್ ಪಾಷಾ, ಸಿ.ಎಂ.ಮಲ್ಲಿಕಾರ್ಜುನ್, ತತ್ತೂರು ಲೋಕೇಶಪ್ಪ, ಡಾ.ಶಂಕರ್, ಸು.ದಾ.ವೆಂಕಟೇಶ್, ಸತೀಶ್, ಮಂಚನಬಲೆ ಶ್ರೀನಿವಾಸ್, ರೆಡ್ಡಪ್ಪ, ನರಸಿಂಹರೆಡ್ಡಿ, ಲಕ್ಷ್ಮಿನರಸಿಂಹ, ಟಿ.ವಿ.ಚಂದ್ರಶೇಖರ್, ನಾರಾಯಣಸ್ವಾಮಿ ಹಾಜರಿದ್ದರು.