Sidlaghatta : ಶಿಡ್ಲಘಟ್ಟ ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಬುಧವಾರ ಕಸಾಪ (Kannada Sahitya Parishat) ವತಿಯಿಂದ ಆಯೋಜಿಸಿದ್ದ “ಸ್ವಾತಂತ್ರ್ಯ ಅಮೃತ ಸಿಂಚನ” ಕಾರ್ಯಕ್ರಮವನ್ನು ಉದ್ಘಾಟಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯರಾಮರೆಡ್ಡಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಕಸಾಪ ಏಕಕಾಲದಲ್ಲಿ ತಾಲ್ಲೂಕಿನ 110 ಕ್ಕೂ ಹೆಚ್ಚಿನ ಶಾಲಾ ಕಾಲೇಜುಗಳಲ್ಲಿನ ಮಕ್ಕಳ ಮನಸ್ಸಿನಲ್ಲಿ ಸ್ವಾತಂತ್ರದ ಕಹಳೆಯ ಕೂಗನ್ನು ಮೊಳಗಿಸಿ, ಭಾರತದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮೆಲುಕು ಹಾಕುತ್ತಿರುವುದು ಶ್ಲಾಘನೀಯ ಹಾಗೂ ಅನುಕರಣೀಯ ಸಂಗತಿ ಎಂದು ಅವರು ತಿಳಿಸಿದರು.
ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪ್ರತಿಯೊಬ್ಬರೂ ಅಮೃತಮಹೋತ್ಸವದ ನೆನಪಿನಲ್ಲಿ ಸ್ಮರಣೆ ಮಾಡಬೇಕಿದೆ. ಅವರ ತ್ಯಾಗ ಬಲಿದಾನದ ಬಗ್ಗೆ ತಿಳಿಯಬೇಕಿದೆ. ನಮ್ಮ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿ ಮತ್ತು ಆಗಿನ ಪರಿಸ್ಥಿತಿಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಕಸಾಪ ಕಾರ್ಯಕ್ರಮ ಆಯೋಜಿಸುತ್ತಿರುವುದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 110 ಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿನಲ್ಲಿ “ಭಾರತದ ಸ್ವಾತಂತ್ರ್ಯ ಹೋರಾಟಗಾರರು” ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಸಿದ್ದೇವೆ. ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳ ವಿಧ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಪ್ರತಿ ವಿಭಾಗಕ್ಕೆ ತಲಾ ಮೂರು ಜನ ವಿಧ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಪುಸ್ತಕ, ಪ್ರಮಾಣಪತ್ರ ಮತ್ತು ಪೆನ್ ಬಹುಮಾನವಾಗಿ ತಾಲ್ಲೂಕು ಕಸಾಪ ವತಿಯಿಂದ ಏಕಕಾಲದಲ್ಲಿ ನೀಡುತ್ತಿದ್ದೇವೆ. ಕಸಾಪ ಪದಾಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಿಂದ ಏಕಕಾಲದಲ್ಲಿ 330 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲು ಸಾಧ್ಯವಾಗಿದೆ. ಎಲ್ಲಾ ಶಾಲೆ ಮತ್ತು ಕಾಲೇಜುಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪರಿಚಯ ಮಾಡಿಸಿ ಗೌರವ ಸಲ್ಲಿಸುವ ಕೆಲಸ ಮಾಡಲಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ಮಾತನಾಡಿ, ಮುಖ್ಯ ಅತಿಥಿಗಳಾಗಿ ಮಾತಾಡಿದರು. ಉದಾತ್ತ ಚೇತನಗಳ ತ್ಯಾಗದಿಂದ ಲಭಿಸಿದ ಪವಿತ್ರವಾದ ಸ್ವಾತಂತ್ರ್ಯದ ಕಥೆಯನ್ನು ಈಗಿನ ಪೀಳಿಗೆಗೆ ಪರಿಚಯಿಸಬೇಕು. ಸ್ವಾತಂತ್ರ್ಯ ಹೋರಾಟದ ನಾಯಕರ ಕರೆಗೆ ಸ್ಪಂದಿಸಿದ ಪ್ರತಿ ಹಳ್ಳಿ ಕೂಡ ತಾಯಿ ಭಾರತಿಗಾಗಿ ತನ್ನ ಕಂದಮ್ಮಗಳು ಮಾಡಿದ ತ್ಯಾಗಕ್ಕಾಗಿ ಹೆಮ್ಮೆಯಿಂದ ತಲೆ ಎತ್ತಿ ನಿಂತಿತು. ರಾಷ್ಟ್ರವನ್ನು ಬ್ರಿಟಿಷ್ ಸಂಕೋಲೆಗಳಿಂದ ಮುಕ್ತಗೊಳಿಸಲು, ಭಾರತಾಂಬೆಯ ಆ ಪ್ರೀತಿಯ ಮಕ್ಕಳು ಸಂತೋಷದಿಂದ ಬ್ರಿಟಿಷರ ಗುಂಡುಗಳಿಗೆ ಒಡ್ಡಿಕೊಂಡರು. ಹುತಾತ್ಮರ ತ್ಯಾಗ ಸ್ಮರಿಸುವ ಉದ್ದೇಶದಿಂದ ನಡೆಯುವ ಆಚರಣೆಗಳು ಆ ಮಹಾಮಹಿಮರ ಆಶಯಗಳನ್ನು ಪಸರಿಸುತ್ತಿವೆ ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ 21 ವಿದ್ಯಾರ್ಥಿಗಳಿಗೆ ಪುಸ್ತಕ ಪ್ರಮಾಣಪತ್ರ ಮತ್ತು ಪೆನ್ ನೀಡಲಾಯಿತು. ಶಾಲಾ ಗ್ರಂಥಾಲಯಕ್ಕೆ ಕಸಾಪ ವತಿಯಿಂದ ಪುಸ್ತಕಗಳನ್ನು ನೀಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಡಾಲ್ಫಿನ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎ.ನಾಗರಾಜ್, ಸಾಹಿತಿಗಳಾದ ಪಾ.ಮು.ಚಲಪತಿಗೌಡ, ಪ್ರಶಾಂತ್ ರಾಮಸ್ವಾಮಿ, ಪ್ರಾಂಶುಪಾಲರಾದ ಸುದರ್ಶನ್, ಮುನಿಶಾಮಪ್ಪ, ಉಪನ್ಯಾಸಕ ಮೋಹನ್ ಕುಮಾರ್, ಶಿಕ್ಷಕ ರಾಮಾಂಜಿ, ಕಸಾಪ ಸಾಂಸ್ಕೃತಿಕ ಪ್ರತಿನಿಧಿ ಭಕ್ತರಹಳ್ಳಿ ನಾಗೇಶ್, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.