Sidlaghatta :
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದು ಕನ್ನಡಿಗರೆಲ್ಲರ ಒಗ್ಗಟ್ಟಿನ ಪ್ರತೀಕವಾಗಿದೆ. ಇದು ಎಲ್ಲರಲ್ಲೂ ಸೋದರತ್ವ ಭಾವನೆ ಮೂಡಿಸಲು ನೆರವಾಗಲಿದೆ ಎಂದು ಶಿಡ್ಲಘಟ್ಟದ ತಹಶೀಲ್ದಾರ್ ಬಿ.ಎಸ್.ರಾಜೀವ್ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ರಾಜ್ಯೋತ್ಸವ ಅಂಗವಾಗಿ ಕೋಟಿ ಕಂಠ ಗಾಯನವನ್ನು ಹಮ್ಮಿಕೊಂಡಿದ್ದು ಎಲ್ಲರ ಸ್ಪಂಧನೆ ಅಭೂತಪೂರ್ವವಾಗಿದೆ. ನಾಡನ್ನು ಕಟ್ಟುವ ಈ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.
ಶಿಡ್ಲಘಟ್ಟ ನಗರದ ಶಾಲಾ ಕಾಲೇಜಿನ ಸುಮಾರು ಮೂರು ಸಾವಿರ ವಿದ್ಯಾರ್ಥಿಗಳು ಏಕ ಕಾಲಕ್ಕೆ ಕನ್ನಡ ನಾಡು ನುಡಿಯನ್ನು ಮೆರೆವ ಗೀತ ಗಾಯನಕ್ಕೆ ಧ್ವನಿಗೂಡಿಸಿದರು. ನಾಡಿನ ಮಹನೀಯರ ವೇಷಭೂಷಣ ಧರಿಸಿದ ವಿದ್ಯಾರ್ಥಿಗಳು ಗಮನ ಸೆಳೆದರು. ಕನ್ನಡಪರ ಸಂಘಟನೆ, ಕನ್ನಡ ಸಾಹಿತ್ಯ ಪರಿಷತ್, ರೈತ ಸಂಘ, ದಲಿತ ಸಂಘಟನೆಗಳು, ಶಿಕ್ಷಕರು, ನಾನಾ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ನಾಡಗೀತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾ ಚೇತನ ಮತ್ತು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟ ಬೇಕು ಹಾಡುಗಳನ್ನು ಸಾಮೂಹಿಕವಾಗಿ ಹಾಡಲಾಯಿತು.
ತಹಶಿಲ್ದಾರ್ ಬಿ.ಎಸ್.ರಾಜೀವ್ ಕನ್ನಡ ನಾಡು ನುಡಿಯ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಲಾ ಕಾಲೇಜು ವಿಧ್ಯಾರ್ಥಿಗಳು ಓನಕೆ ಓಬವ್ವ, ಸರ್.ಎಂ.ವಿ, ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಮಹನೀಯರ ವೇಷ ಭೂಷಣ ಧರಿಸಿದ್ದರು.
ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್, ಪೌರಾಯುಕ್ತ ಶ್ರೀಕಾಂತ್,ಇಒ ಮುನಿರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ, ಸರ್ಕಾರಿ ನೌಕರರ ಸಂಘದ ಅ಼ಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಸಿ.ಡಿ.ಪಿ.ಒ.ನೌತಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥ ರೆಡ್ಡಿ, ಶಿಕ್ಷಣ ಸಂಯೋಜಕ ಭಾಸ್ಕರ್ ರೆಡ್ಡಿ, ಪಶು ವೈಧ್ಯ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಕೆ.ರಮೇಶ್, ಸೇರಿ ನಾನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.