Sidlaghatta : ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಅವರು ಮಾತನಾಡಿದರು.
ಕನ್ನಡ ರಾಜ್ಯೋತ್ಸವವು ಒಂದು ಸಂಭ್ರಮದ ಹಬ್ಬ. ಕರ್ನಾಟಕ ಒಂದು ಸುಂದರ ಬಿಡು ನಮ್ಮ ಕರ್ನಾಟಕ ಕಲೆ, ಸಾಹಿತ್ಯ, ನಾಟಕ, ನೃತ್ಯ ಮುಂತಾದ ಕಲೆಗಳಿಂದ ಶ್ರೀಮಂತವಾಗಿದೆ. ನಮ್ಮ ನಾಡು ನುಡಿ ಮತ್ತು ಕಲೆ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿಯೂ ನಮ್ಮೆಲ್ಲರದು ಎಂದು ತಿಳಿಸಿದರು.
ಕನ್ನಡ ನಾಡಲ್ಲಿ ಹುಟ್ಟಿರುವುದು ನಮ್ಮೆಲ್ಲರ ಅದೃಷ್ಟ. ನವೆಂಬರ್ 1 ರಂದು ನಾವೆಲ್ಲರೂ ಅತ್ಯಂತ ಸಡಗರ, ಸಂಭ್ರಮದಿಂದ ಎಲ್ಲ ಜಾತಿ ಮತ ಧರ್ಮಗಳ ಜನರು ಸೇರಿ ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ. ನಾಡಿನ ಏಕತೆ,ಸಮಾನತೆ, ಸ್ವಾಭಿಮಾನ ಹಾಗೂ ಸಹಬಾಳ್ವೆಯ ಸಂಕೇತವೇ ರಾಜ್ಯೋತ್ಸವ ಎಂದು ಹೇಳಿದರು.
ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ, ನವೆಂಬರ್ ತಿಂಗಳಲ್ಲಿ ಮಾತ್ರ ನಾವು ಕನ್ನಡಿಗರಾದರೆ ಸಾಲದು. ಪ್ರತಿನಿತ್ಯ ನಾವು ಕನ್ನಡಿಗರಾಗಬೇಕು. ಕನ್ನಡವೇ ನಮ್ಮ ಉಸಿರಾಗಿರಾಗಲಿ. ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ, ಅದು ಕರುನಾಡ ನೆಲ, ಜಲ, ಜನ, ಬದುಕು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡಿದೆ ಎಂದರು.
ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಮಗ್ರ ಕೃಷಿ ಪದ್ಧತಿಯನ್ನು ಅನುಷ್ಠಾನಗೊಳಿಸಿರುವ ಪ್ರಗತಿಪರ ರೈತ ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ, ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ರೈತ ಮಳ್ಳೂರು ಎಂ.ಟಿ.ಮುನೇಗೌಡ, ಸ್ವಾತಂತ್ರ ಹೋರಾಟಗಾರ ಹಾಗೂ ನಾಟೀ ವೈದ್ಯ 103 ವರ್ಷದ ದೇವರಮಳ್ಳೂರು ಕೆ.ಶ್ರೀರಾಮಯ್ಯ ಹಾಗೂ ಇಬ್ಬರು ಮಹಿಳಾ ಪೌರಕಾರ್ಮಿಕರು ಮತ್ತು ಕನ್ನಡದಲ್ಲಿ 125 ಕ್ಕೆ 125 ಅಂಕಗಳನ್ನು ಪಡೆದ ಹದಿನೈದು ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮಕ್ಕೆ ಮುನ್ನ ನಗರದ ಬಸ್ ನಿಲ್ದಾಣದ ಬಳಿ ಕನ್ನಡ ಬಾವುಟದ ಧ್ವಜಾರೋಹಣ ಕಾರ್ಯಕ್ರಮವನ್ನು ನಡೆಸಲಾಯಿತು. ಶಾಸಕ ವಿ.ಮುನಿಯಪ್ಪ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣವನ್ನು ನೆರವೇರಿಸಿದರು. ಮುತ್ತಿನ ಪಲ್ಲಕ್ಕಿಯಲ್ಲಿ ಭುವನೇಶ್ವರಿ ಭಾವಚಿತ್ರವನ್ನಿರಿಸಿ ನಗರದ ಟಿ.ಬಿ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಶಾಲಾ ಮಕ್ಕಳು ತಮ್ಮ ಬ್ಯಾಂಡ್ ಸೆಟ್ ತಂಡದೊಂದಿಗೆ ಭಾಗಿಯಾಗಿದ್ದರು. ಪೂರ್ಣ ಕುಂಭ ಹೊತ್ತ ಮಹಿಳೆಯರು ಸಹ ಮೆರವಣಿಗೆಯಲ್ಲಿ ಜೊತೆಯಾದರು.
ಮಾಜಿ ಶಾಸಕ ಎಂ.ರಾಜಣ್ಣ, ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ಪೌರಾಯುಕ್ತ ಶ್ರೀಕಾಂತ್, ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ಸುರೇಂದ್ರಗೌಡ, ಕಸಾಪ ತಾಲ್ಲುಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಸತೀಶ್ ಹಾಜರಿದ್ದರು.