ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ, ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ 66 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವರ್ಷಕ್ಕೊಮ್ಮೆ ರಾಜ್ಯೋತ್ಸವದ ಹೆಸರಿನಲ್ಲಿ ಹಬ್ಬ ಆಚರಿಸಿದ ಮಾತ್ರಕ್ಕೆ ಭಾಷೆ ಉಳಿಯುವುದಿಲ್ಲ ಬದಲಿಗೆ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಮಾತನಾಡುವುದು ಸೇರಿದಂತೆ ಮಾತೃಭಾಷೆಯಲ್ಲಿ ವ್ಯವಹರಿಸಿದಾಗ ಮಾತ್ರ ನಮ್ಮ ಭಾಷೆ ಉಳಿಯುತ್ತದೆ. ಕನ್ನಡ ನಾಡು, ನುಡಿಯ ರಕ್ಷಣೆ ಹಾಗೂ ಗಡಿಭಾಗಗಳ ರಕ್ಷಣೆ ಪ್ರತಿಯೊಬ್ಬ ಯುವಕರ ಆದ್ಯ ಕರ್ತವ್ಯವಾಗಿದ್ದು ಕರ್ನಾಟಕದ ಗತಕಾಲದ ವೈಭವವನ್ನು ಸ್ಮರಿಸುವುದರೊಂದಿಗೆ ಮಾತೃ ಭಾಷೆಯ ಅಭಿವೃಧ್ದಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.
ನೆರೆ ರಾಜ್ಯಗಳಿಗೆ ಹೋದರೆ ಅಲ್ಲಿನ ಸ್ಥಳೀಯ ಭಾಷೆಯಲ್ಲಿಯೆ ವ್ಯವಹರಿಸಬೇಕಾಗುತ್ತದೆ. ಪ್ರಾಚೀನ ಭಾಷೆಯಾದ ಕನ್ನಡವನ್ನು ನಮ್ಮ ರಾಜ್ಯದ ಗಡಿ ಭಾಗಗಳಲ್ಲಿ ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿದಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125 ಕ್ಕೆ 125 ಪಡೆದ ವಿದ್ಯಾರ್ಥಿಗಳು ಸೇರಿದಂತೆ ಕನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಷ್ಟçಮಟ್ಟಕ್ಕೆ ಆಯ್ಕೆಯಾದ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯಲು, ಶಿರಸ್ತೇದಾರ್ ಕೆ.ಎನ್.ಮಂಜುನಾಥ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.