ಕೈವಾರ ಯೋಗಿನಾರಾಯಣ ಯತೀಂದ್ರರ ತತ್ವ, ಆದರ್ಶಗಳನ್ನು ಸಮಾಜದ ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.
ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬಾನುವಾರ ಆಯೋಜಿಸಲಾಗಿದ್ದ ಯೋಗಿ ನಾರೇಯಣ ಯತೀಂದ್ರರ ಜಯಂತಿ ಕಾರ್ಯಕ್ರಮದಲ್ಲಿ ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಕಾಲಜ್ಞಾನ ಎಂದರೆ ಯೋಗ ಸಿದ್ಧಿ ಪಡೆದ ತಪಸ್ವಿಯ ಮುಖದಿಂದ ವಿಶ್ವಕಲ್ಯಾಣಕ್ಕಾಗಿ ಹೊರಬೀಳುವ ದೈವವಾಣಿ. ಭವಿಷ್ಯದಲ್ಲಿಘಟಿಸಲಿರುವ ವಿಶ್ವದ ಸ್ಥಿತಿಗತಿಗಳು ವಾಕ್ಸಿದ್ಧಿಯುಳ್ಳ ಮಹಾಪುರುಷರ ವಾಣಿಯ ಮೂಲಕ ಕಥನಗಳಾಗಿ ಹೊರಬೀಳುತ್ತವೆ. ಅದು ವಿಪತ್ತಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸೂಚನೆ ನೀಡುತ್ತದೆ. ಇದನ್ನು ರಚಿಸಿರುವ ಶ್ರೀ ಯೋಗಿ ನಾರೇಯಣ ಕೈವಾರ ತಾತಯ್ಯ ಅವರು ಸಿದ್ಧಿ ಪಡೆದ ಸಾಧಕ ಯೋಗಿ. ಮಾತ್ರವಲ್ಲಸಮಾಜ ಸುಧಾರಕರೂ ಹೌದು ಎಂದರು.
ಯೋಗಿ ನಾರೇಯಣ ಯತೀಂದ್ರರನ್ನು ಯಾವುದೇ ಒಂದು ಸಮಾಜಕ್ಕೆ ಮಾತ್ರ ಸೀಮಿತಗೊಳಿಸದೇ ಎಲ್ಲರೂ ಸೇರಿ ಮಹಾತ್ಮರ ಜಯಂತಿಗಳನ್ನು ಆಚರಿಸುವಂತಾಗಬೇಕು. ಕೈವಾರ ಯೋಗಿ ನಾರೇಯಣ ಯತೀಂದ್ರರು ನಮ್ಮದೇ ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿರುವುದು ನಮ್ಮೆಲ್ಲರ ಪೂರ್ವ ಪುಣ್ಯ, ನೆರೆಯ ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ಹುಟ್ಟಿ ಬೆಳೆದ ಕೈವಾರ ತಾತಯ್ಯನವರು ತಮ್ಮ ಕುಲ ಕಸುವಾದ ಬಳೆ ವ್ಯಾಪಾರ ಮಾಡುತ್ತಲೇ ಕಾಲಜ್ಞಾನ ಬರೆದಂತಹ ಮಹತ್ಮರು ಎಂದರು.
ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ, ಸರ್ಕಾರದಿಂದ ಈಗಾಗಲೇ ಸುಮಾರು 36 ಜಯಂತಿಗಳನ್ನು ಆಚರಿಸುತ್ತಿದ್ದೇವಾದರೂ ಮಹಾತ್ಮರ ಜಯಂತಿಗಳನ್ನು ಯಾವುದೋ ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸುವುದು ದುರುದೃಷ್ಟದ ಸಂಗತಿ. ಸರ್ಕಾರ ಮಹಾತ್ಮರ ಜಯಂತಿಗಳನ್ನು ಆಚರಿಸಲು ಮುಂದಾಗಿರುವುದು ಮುಂದಿನ ಪೀಳಿಗೆಗೆ ಇಂತಹ ಮಹಾತ್ಮರ ಸಾಧನೆ ತಿಳಿಯಲಿ ಎಂದು. ಹಾಗಾಗಿ ಮಹಾತ್ಮರ ಜಯಂತಿಗಳನ್ನು ಎಲ್ಲರೂ ಸೇರಿ ಆಚರಿಸುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣವಾಗಬೇಕು ಎಂದರು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಕೆ.ಎನ್.ಮಂಜುನಾಥ್, ಡಾ.ಸತ್ಯನಾರಾಯಣರಾವ್, ಸಮುದಾಯದ ಮುಖಂಡರಾದ ಬಿ.ಕೆ.ವೇಣು, ಎಸ್.ಎಸ್.ಸೋಮಶೇಖರ್, ಶಂಕರ್,ಶ್ರೀನಾಥ್ ಹಾಜರಿದ್ದರು.
ಬಲಿಜ ಸಮುದಾಯದವರಿಂದ ನಗರದ ಕೋಟೆ ವೃತ್ತದಲ್ಲಿ ಯೋಗಿ ನಾರೇಯಣ ಯತೀಂದ್ರರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸದ್ಗುರು ಶ್ರೀ ಯೋಗಿ ನಾರೇಯಣ ಕೈವಾರ ತಾತಯ್ಯನವರ ಪಲ್ಲಕ್ಕಿ ಉತ್ಸವವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ನೆರವೇರಿಸಲಾಯಿತು. ಅಷ್ಟಾಕ್ಷರಿ ಜಪಿಸುತ್ತಾ ಭಕ್ತಿಯೋಗದಲ್ಲಿದ್ದ ನಾರಣಪ್ಪನವರು ಯೋಗನರಸಿಂಹವನದ ಗಿರಿಗುಹೆಯಲ್ಲಿ ತಪಸ್ಸಿದ್ಧಿಯನ್ನು ಪಡೆದು ಯೋಗಿನಾರೇಯಣ ಯತೀಂದ್ರರೆನಿಸಿದರು. ಶ್ರೀ ಯತೀಂದ್ರರ ಕಾಲಜ್ಞಾನವಾಣಿಯ ಭವಿಷ್ಯ ಕಥನಗಳು ಸೂತ್ರ ಪ್ರಾಯವಾಗಿವೆ. ವ್ಯಾಪಕವಾದ ವಿಷಯಗಳನ್ನು ಚಿಕ್ಕದಾಗಿ ಹೇಳಲಾಗಿದೆ. ಅವರ ನುಡಿಗಳು ನಮ್ಮ ಬದುಕಿಗೆ ಮಾರ್ಗದರ್ಶಿ ಸೂತ್ರಗಳಾಗಲಿ ಎಂದು ಮಾಜಿ ಶಾಸಕ ಎಂ.ರಾಜಣ್ಣ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾರಮೇಶ್, ಪೌರಾಯುಕ್ತ ಆರ್.ಶ್ರೀಕಾಂತ್, ಗ್ರಾಮಾಂತರ ಠಾಣೆ ಪಿಎಸ್ಸೈ ಸತೀಶ್, ನಗರಸಭೆ ಸದಸ್ಯರಾದ ಎಸ್.ರಾಘವೇಂದ್ರ, ವೆಂಕಟಸ್ವಾಮಿ, ಬಳೆರಘು, ಶ್ರೀನಾಥ್, ನರೇಶ್ ಹಾಜರಿದ್ದರು.