ಶಿಡ್ಲಘಟ್ಟ ನಗರದ ನಗರ್ತಪೇಟೆಯಲ್ಲಿನ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಜೆಡಿಎಸ್‌ನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ ಮಾತನಾಡಿದರು.
ನಮ್ಮ ಪಕ್ಷದ ಸಕ್ರಿಯ ಸದಸ್ಯತ್ವ ಸಂಖ್ಯೆ ಹೆಚ್ಚಾಗದ ಹೊರತು ನಮ್ಮ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ನಮ್ಮ ನಾಯಕ ಕುಮಾರಣ್ಣ ಮುಖ್ಯಮಂತ್ರಿಯಾಗುವುದಿಲ್ಲ. ಹಾಗಾಗಿ ಸದಸ್ಯತ್ವ ನೋಂದಣಿಯನ್ನು ಲಘುವಾಗಿ ಪರಿಗಣಿಸಬಾರದು ಎಂದು ಅವರು ತಿಳಿಸಿದರು.
ನಾವು ಕೇವಲ ಶೇ 19 ರಷ್ಟು ಮತದಾರರನ್ನಷ್ಟೆ ಹೊಂದಿದ್ದೇವೆ. ಹೆಚ್ಚಿನ ಸದಸ್ಯತ್ವ ಮಾಡಿದಾಗ ಪಕ್ಷ ಸಂಘಟನೆ ಬಲಗೊಳ್ಳುತ್ತದೆ ಆಗ ಮಾತ್ರ ನಾವು ಅಧಿಕಾರಕ್ಕೆ ಬರಲು ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ಪಕ್ಷದ ನಾನಾ ಘಟಕಗಳ ಪದಾಧಿಕಾರಿಗಳ ನೇಮಕ, ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಯಾವುದೆ ರೀತಿಯ ಅಧಿಕಾರ, ನಾಮನಿರ್ದೆಶನ, ಸವಲತ್ತುಗಳನ್ನು ಪಡೆಯಲು ಕಡ್ಡಾಯವಾಗಿ ಸದಸ್ಯರಾಗಿರಬೇಕಾಗುತ್ತದೆ ಎಂದು ಹೇಳಿದರು.
ಪಕ್ಷದ ವರಿಷ್ಠರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮಾಗಡಿಯಲ್ಲಿನ ಅವರ ತೋಟದಲ್ಲಿ ವಿಷನ್ 123 ಕಾರ‍್ಯಾಗಾರ ನಡೆಯುತ್ತಿದ್ದು ಸಂಭವನೀಯ ಅಭ್ಯರ್ಥಿಗಳಿಗೆ ಎಲ್ಲ ರೀತಿಯ ತರಬೇತಿಯನ್ನು ನೀಡಲಾಗುತ್ತಿದೆ.
100 ದಿನಗಳ ಟಾರ್ಗೆಟ್ ನೀಡಿದ್ದು ಈ ಅವಧಿಯಲ್ಲಿ ಅವರು ಪಕ್ಷ ಸಂಘಟನೆ ಸದಸ್ಯತ್ವ ನೊಂದಣಿ ಕಾರ‍್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸೇರಿ ಎಲ್ಲವನ್ನೂ ಪರಿಗಣಿಸಲಾಗುತ್ತಿದೆ. ಅಲ್ಲಿ ವಿಫಲರಾದರೆ ಚುನಾವಣೆಗೆ ಟಿಕೇಟ್ ಇಲ್ಲ ಎಂದು ಎಚ್ಚರಿಸಿದ್ದಾರೆ.
ಹಾಗಾಗಿ ಇಲ್ಲಿ ಅಭ್ಯರ್ಥಿಯಾಗಲಿರುವ ಮೇಲೂರು ರವಿಕುಮಾರ್ ಅವರನ್ನು ಗೆಲ್ಲಿಸುವ ಮೂಲಕ ಅಲ್ಲಿ ಕುಮಾರಣ್ಣ ಅವರನ್ನು ಮುಖ್ಯಮಂತ್ರಿ ಮಾಡಲು ನಿಮ್ಮೆಲ್ಲರ ಶ್ರಮ ಅಗತ್ಯ. ಹೆಚ್ಚಿನ ಸದಸ್ಯತ್ವ ಮಾಡಿಸಲು ಎಲ್ಲರೂ ಶ್ರಮಿಸಬೇಕೆಂದು ಮನವಿ ಮಾಡಿದರು.
ಜೆಡಿಎಸ್‌ನ ತಾಲ್ಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್ ಮಾತನಾಡಿ, ಈ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು 64 ಸಾವಿರ ಕೋಟಿ ರೂಗಳ ರೈತರ ಸಾಲ ಮನ್ನಾ ಮಾಡಿದ್ದರೆ, ಕೇವಲ 20 ತಿಂಗಳ ಕಾಲ ಅಧಿಕಾರ ನಡೆಸಿದ ನಮ್ಮ ಕುಮಾರಣ್ಣ 24 ಸಾವಿರ ಕೋಟಿ ರೂ.ರೈತರ ಸಾಲ ಮನ್ನಾ ಮಾಡಿದ್ದಾರೆ. ರೈತ ಕುಟುಂಬದಲ್ಲಿ ಜನಿಸಿದ ಕುಮಾರಣ್ಣನಿಗೆ ರೈತರ ಕೂಲಿ ಕಾರ್ಮಿಕರ ಬಡವರ ಬಗ್ಗೆ ಅಪಾರ ಕಾಳಜಿಯಿದೆ. ಅವರು ಅಧಿಕಾರಕ್ಕೆ ಬಂದರೆ ನಮ್ಮೆಲ್ಲರ ಬದುಕು ಬಂಗಾರವಾಗಲಿದೆ ಎಂದು ಆಶಿಸಿದರು.
ಕುಮಾರಣ್ಣನ ಅವಧಿಯಲ್ಲಿ ಆದ ಅಭಿವೃದ್ದಿ ಕಾಮಗಾರಿಗಳನ್ನು ಜನಪರ ಕೆಲಸಗಳನ್ನು ಮುಂದಿಟ್ಟು ಹೆಚ್ಚಿನ ಸದಸ್ಯತ್ವವನ್ನು ನೋಂದಣಿ ಮಾಡಬೇಕೆಂದು ಕಾರ‍್ಯಕರ್ತರಲ್ಲಿ ಕೋರಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್‌ಮುನಿಯಪ್ಪ, ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾರಾಯಣಸ್ವಾಮಿ, ಸಯ್ಯದ್, ಗೋಪಾಲ್, ನಂದು, ವೆಂಕಟಸ್ವಾಮಿ, ಸಿ.ಎಂ.ರಮೇಶ್, ಮುಗಿಲಡಪಿ ನಂಜಪ್ಪ, ಜೆ.ವಿ.ಸದಾಶಿವ, ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi