ಎತ್ತಿನಹೊಳೆ ಯೋಜನೆಯ ನೀರು ಬಂದಿದ್ದೆ ಆದಲ್ಲಿ ಅದು ಈ ಭಾಗದ ರೈತರ ಹಾಗೂ ಜನರ ಪುಣ್ಯವೇ ಸರಿ. ಬಿಜೆಪಿ ಸರ್ಕಾರ ಗುತ್ತಿಗೆದಾರರ ಕಣ್ಣಿಗೆ ಬೆಣ್ಣೆ, ರೈತರ ಕಣ್ಣಿಗೆ ಸುಣ್ಣ ಎಂಬ ನಿಲುವು ತಾಳಿದೆ, ಇವರಿಗೆ ಜನರ ನೀರಿನ ಬವಣೆಯ ಚಿಂತೆಯಿಲ್ಲ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ನಗರದ ಹೊರವಲಯದ ಹಂಡಿಗನಾಳ ಬಳಿಯಿರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಕಾರ್ಯಕ್ರಮದ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಸಮಸ್ತ ಜನರ ಹಾಗೂ ರೈತರ ಪರ ಧ್ವನಿಯೆತ್ತಬೇಕಾದ ರಾಷ್ಟ್ರೀಯ ಪಕ್ಷಗಳು ದೇಶದಲ್ಲಿ ಕೋಮು ಸಾಮರಸ್ಯ ಕೆದಡುವ ಮೂಲಕ ರಾಜಕೀಯ ಮಾಡುತ್ತಿದೆ. ಜಾತ್ಯಾತೀತ ರಾಷ್ಟ್ರದಲ್ಲಿ ಪ್ರತಿಯೊಬ್ಬರೂ ಸಹೋದರರಂತೆ ಜೀವನ ನಡೆಸುವ ವಾತಾವರಣ ನಿರ್ಮಿಸಬೇಕಾದ ಸರ್ಕಾರಗಳು ಅದರ ಬದಲಿಗೆ ದ್ವೇಷದ ರಾಜಕಾರಣ ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದರು.
ತಾವು ಪ್ರಧಾನಿಯಾಗಿದ್ದ ಕಾಲದಲ್ಲಿ ದೇಶಾದ್ಯಂತ ಕೋಮುಗಲಭೆಗಳಿಗೆ ಕಡಿವಾಣ ಹಾಕಿದ್ದಲ್ಲದೆ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗಿತ್ತು. ಅದೇ ರೀತಿ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡುವ ಮೂಲಕ ಮಹತ್ತರ ಘೋಷಣೆಗಳನ್ನು ಅನುಷ್ಠಾನಗೊಳಿಸಿದರು. ಹಾಗಾಗಿ ಮುಂಬರುವ 2023 ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಸ್ಪಷ್ಠ ಬಹುಮತ ನೀಡುವ ಮೂಲಕ ರಾಜ್ಯದ ರೈತರ ಹಿತ ಕಾಪಾಡಬೇಕು ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಸತ್ತೋನ ಮನೆ ಸಂಕಟ ಯಮರಾಜನಿಗೇನು ಗೊತ್ತು ಎನ್ನುವ ಹಾಗೆ ದೇಶದ ಜನರ ಹಾಗೂ ರೈತರ ಸಂಕಷ್ಟ ಪ್ರಧಾನಿ ನರೇಂದ್ರ ಮೋದಿಗೇನು ಗೊತ್ತಿದೆ. ದೇಶದಲ್ಲಿ ಕಾಡುತ್ತಿರುವ ಬೆಲೆಯೇರಿಕೆ ನಿಭಾಯಿಸಲಾಗದವರು ದೇಶದಲ್ಲಿ ಹಿಜಾಬ್, ಹಲಾಲ್, ಜಟ್ಕಾ ಮತ್ತಿತರ ವಿಷಯಗಳನ್ನಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ರೌಡಿಯೋರ್ವ ಸತ್ತರೆ ಕುಟುಂಬಕ್ಕೆ 25 ಲಕ್ಷ ನೀಡುವ ರಾಜ್ಯ ಸರ್ಕಾರಕ್ಕೆ, ಗುತ್ತಿಗೆದಾರನೋರ್ವ ಸಾಲದ ಸುಳಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡರೆ ಕನಿಷ್ಟ ಸಾಂತ್ವಾನ ಹೇಳುವ ಸಂಸ್ಕಾರವಿಲ್ಲ ಎಂದರು.
ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆಯ ಮೇಲೆ ನಂಬಿಕೆ ಇಟ್ಟಿರುವ ದೇಶದಲ್ಲಿ ಎಲ್ಲರೂ ಸಹೋದರರಂತೆ ಜೀವಿಸುವಂತಹ ವಾತಾವರಣ ನಿರ್ಮಾಣವಾಗುವ ಜೊತೆಗೆ ರಾಜ್ಯದಲ್ಲಿನ ಬಹುತೇಕ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದರು.
ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿ, ಜನತಾ ಸರ್ಕಾರಗಳು ಅಧಿಕಾರಿದಲ್ಲಿದ್ದಾಗ ಬಿಟ್ಟರೆ ಬಹುಶಃ ಈವರೆಗೂ ರಾಜ್ಯದ ರೈತರು ಸೇರಿದಂತೆ ನಾಗರಿಕರು, ಅಲ್ಪಸಂಖ್ಯಾತರು, ಮಹಿಳೆಯರಿಗೆ ನ್ಯಾಯ ಸಿಕ್ಕಿಲ್ಲ ಎಂದರು. ಈಗಿರುವ ಸರ್ಕಾರಗಳು ಕೇವಲ ಅವರವರ ಏಳಿಗೆಗೆ ಮಾತ್ರ ರಾಜಕಾರಣ ಮಾಡುತ್ತಿದ್ದು ರಾಜ್ಯದ ಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದರು. ಹಾಗಾಗಿ ಕಳೆದ ಚುನಾವಣೆಯಲ್ಲಿ ರಾಜ್ಯಾದ್ಯಂತ ಅತಿ ಕಡಿಮೆ ಅಂತರದಲ್ಲಿ ಸುಮಾರು 25 ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಪ್ರತಿಯೊಬ್ಬ ಮುಖಂಡರು, ಕಾರ್ಯಕರ್ತರು ಹಳ್ಳಿ ಹಳ್ಳಿಯಲ್ಲಿ ಸುತ್ತಾಡಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್, ಚಿಕ್ಕಬಳ್ಳಾಪುರ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ಮುನೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯರಾದ ತೂಪಲ್ಲಿ ಚೌಡರೆಡ್ಡಿ, ಗೋವಿಂದರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಕ್ ಮುನಿಯಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ಮುಖಂಡರಾದ ಹುಜಗೂರು ರಾಮಣ್ಣ, ಜೆ.ವಿ.ಸದಾಶಿವ, ಡಾ.ಧನಂಜಯರೆಡ್ಡಿ ಹಾಜರಿದ್ದರು.