Sidlaghatta : ಜಂಗಮಕೋಟೆ ಹೋಬಳಿಯ ಗ್ರಾಮ ಪಂಚಾಯಿತಿಗಳು ಮತ್ತು ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ (FES) ಸಂಸ್ಥೆಯ ಸಹಯೋಗದೊಂದಿಗೆ 16ನೇ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಗುರುವಾರ ಬೆಳ್ಳೂಟಿ ಗೇಟ್ ಬಳಿ ಇರುವ ಶ್ರೀ ಗುಟ್ಟಾಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಮಾತನಾಡಿ, “ಗ್ರಾಮ ಪಂಚಾಯಿತಿಯು ಹಳ್ಳಿಗಳ ಪ್ರಧಾನಮಂತ್ರಿಯೂ ಮುಖ್ಯಮಂತ್ರಿಯೂ ಹೀಗಿರುತ್ತದೆ. ಈ ಜವಾಬ್ದಾರಿಯನ್ನು ಸಮರ್ಪಕವಾಗಿ, ಜನಪರವಾಗಿ ನಿಭಾಯಿಸಲು ನಾವು ಸದಾ ಸನ್ನದ್ಧರಾಗಬೇಕು,” ಎಂದು ಒತ್ತಾಯಿಸಿದರು.
ನಾಗಮಂಗಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಯನಾ ನಿಖತ್ ಮಾತನಾಡಿ, “ಪಂಚಾಯತ್ ರಾಜ್ ದಿನವನ್ನು ಹಬ್ಬದಂತೆ ಆಚರಿಸಬೇಕು. ವಾರ್ಡ್ ಸಭೆ, ಗ್ರಾಮ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ನಮ್ಮ ಗ್ರಾಮಗಳ ಅಭಿವೃದ್ಧಿ ಸಾಧ್ಯ,” ಎಂದು ಹೇಳಿದರು.
FES ಸಂಸ್ಥೆಯ ಎನ್. ರಮೇಶ್ ಮಾತನಾಡಿ, “ಏಪ್ರಿಲ್ 24ರಂದು ನಾವು ಆಚರಿಸುವ ಈ ದಿನ, ಗ್ರಾಮ ಪಂಚಾಯಿತಿಗಳ ಸಬಲತೆ ಮತ್ತು ಸ್ವಾಯತ್ತತೆಯನ್ನು ಗೌರವಿಸುವ ದಿನ. ಗ್ರಾಮಗಳು ತಮ್ಮ ಅಭಿವೃದ್ಧಿಗೆ ತಾವೇ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಪಡೆದಿವೆ,” ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಶೈಲಜಾ ಅವರು, ಪಂಚಾಯಿತಿ ವ್ಯವಸ್ಥೆಯ ಇತಿಹಾಸದ ಬೆಳವಣಿಗೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ನಾಗಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿಳ್ಳಪ್ಪ, ಸಂಪನ್ಮೂಲ ವ್ಯಕ್ತಿ ಕ್ಯಾತಪ್ಪ, FES ಸಂಸ್ಥೆಯ ನರೇಂದ್ರಬಾಬು, ನರಸಿಂಹಪ್ಪ, ಲೀಲಾವತಿ, ಗೋಪಿ, ವಿವಿಧ ಗ್ರಾಮ ಪಂಚಾಯಿತಿ ಸದಸ್ಯರು, NRLM ಒಕ್ಕೂಟ ಸದಸ್ಯರು ಮತ್ತು ಸಮುದಾಯದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.