Jangamakote, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 2,863 ಎಕರೆ ಭೂಮಿಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ರೈತರ ಅಭಿಪ್ರಾಯ ಸಂಗ್ರಹ ಸಭೆ ಜಂಗಮಕೋಟೆಯ ಜ್ಯೋತಿ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಸಭೆಯಲ್ಲಿ ಮಾತನಾಡಿ, “ಈ ಯೋಜನೆಯು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ರಾಷ್ಟ್ರೀಯ ಹೆದ್ದಾರಿಗೂ ಸಮೀಪವಿರುವ ಕಾರಣದಿಂದ ಹೂಡಿಕೆದಾರರು ಹೆಚ್ಚು ಆಸಕ್ತರಾಗಲಿದ್ದಾರೆ. ಇದರಿಂದ ಸ್ಥಳೀಯ ಜನರಿಗೆ ಉದ್ಯೋಗ, ಆರ್ಥಿಕ ಬೆಳವಣಿಗೆ, ಅಭಿವೃದ್ಧಿ ಸಾಧ್ಯ” ಎಂದು ಹೇಳಿದರು.
ಈ ಪ್ರದೇಶದಲ್ಲಿ ಸುಮಾರು 500 ಎಕರೆ ಸರ್ಕಾರಿ ಭೂಮಿ ಸೇರಿದಂತೆ ಒಟ್ಟು 2,863 ಎಕರೆ ಭೂಮಿ ಕೈಗಾರಿಕಾ ಅಭಿವೃದ್ಧಿಗೆ ಗುರುತಿಸಲಾಗಿದೆ. ಆದರೆ, ಕೆಲ ರೈತರು ಭೂಮಿ ನೀಡಲು ಸಮ್ಮತವಾಗಿದ್ದರೆ, ಹಲವರು ತಮ್ಮ ಜೀವನೋಪಾಯ ಮತ್ತು ಮಕ್ಕಳ ಭವಿಷ್ಯದ ಕಾರಣದಿಂದ ವಿರೋಧ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಯಾವುದೇ ಬಲವಂತ ಅಥವಾ ಒತ್ತಡವಿಲ್ಲದೆ ರೈತರ ಅಭಿಪ್ರಾಯದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ರೈತರಿಗೆ ಆರ್ಥಿಕ ಪರಿಹಾರ ಜೊತೆಗೆ ಕೈಗಾರಿಕೆಯಲ್ಲಿ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ಕುರಿತು ಸಮಾಲೋಚನೆ ನಡೆಯುತ್ತಿದೆ ಎಂದರು.
ಸಭೆಯಲ್ಲಿ ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್, KIADB ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್, ತಹಸೀಲ್ದಾರ್ ಬಿ.ಎನ್. ಸ್ವಾಮಿ, ತಾಲೂಕು ಪಂಚಾಯತ್ ಇಒ ಹೇಮಾವತಿ, ರೈತ ಮುಖಂಡರು ಭಾಗವಹಿಸಿದ್ದರು. ರೈತರು ತಮ್ಮ ಅಭಿಪ್ರಾಯವನ್ನು ಬಿಳಿ ಹಾಳೆ (ಅನುಮತಿ) ಅಥವಾ ಕೆಂಪು ಹಾಳೆ (ವಿರೋಧ)ನಲ್ಲಿ ಬರೆದು ಸಲ್ಲಿಸಿದರು.
ಸಚಿವರು ಮಾತನಾಡುತ್ತಾ, “ಇದು ಪಾರದರ್ಶಕ ಪ್ರಕ್ರಿಯೆಯಾಗಿದೆ. ರೈತರ ವಿಶ್ವಾಸದ ಮೇಲೆಯೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಗ್ರಾಮೀಣ ಭಾಗದ ಅಭಿವೃದ್ಧಿಗೆ ಕೈಗಾರಿಕೆಯನ್ನು ಪೂರಕವಾಗಿ ಬಳಸಿಕೊಳ್ಳಬೇಕು” ಎಂದು ಹೇಳಿದರು.
ಸಭೆಯಲ್ಲಿ 74% ರೈತರ ಸಹಭಾಗಿತ್ವ
ಅಭಿಪ್ರಾಯ ಸಂಗ್ರಹ ಸಭೆಗೆ ಒಟ್ಟು 1,082 ಮಂದಿ ಖಾತೆದಾರರಿಗೆ ತಾಲ್ಲೂಕು ಆಡಳಿತದಿಂದ ತಿಳುವಳಿಕೆ ಪತ್ರ ಕಳುಹಿಸಲಾಗಿದ್ದು, 802 ಮಂದಿ ರೈತರು (ಶೇ 74) ಸಭೆಗೆ ಹಾಜರಾದರೆ, 280 ಮಂದಿ (ಶೇ 26) ಗೈರಾಗಿದ್ದರು.
ಈ ಸಭೆಯಲ್ಲಿ 437 ಮಂದಿ ರೈತರು (ಶೇ 40.3) ಜಮೀನನ್ನು ಕೆಐಎಡಿಬಿಗೆ ನೀಡುವುದಿಲ್ಲ ಎಂದು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದು, 365 ಮಂದಿ ರೈತರು (ಶೇ 33.7) ಜಮೀನು ನೀಡುವುದಾಗಿ ತಮ್ಮ ಒಪ್ಪಿಗೆ ನೀಡಿದರು.
ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್, “ಇನ್ನೂ ಸಹ ಗೈರು ಹಾಜರಾದ ರೈತರ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕಿದೆ. ಇಲ್ಲವಾದಲ್ಲಿ ಕಾನೂನಿನ ರೀತಿಯಲ್ಲಿ ಎದುರಾಗಬಹುದಾದ ಅಡಚಣೆಗಳನ್ನೂ ಪರಿಗಣಿಸಬೇಕಾಗುತ್ತದೆ. ಒಟ್ಟಾರೆ ಅಭಿಪ್ರಾಯದ ಅಂಕಿ ಅಂಶದ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು,” ಎಂದು ಹೇಳಿದರು.
ಸಚಿವರು ಮುಂದುವರೆದು, “ಒಮ್ಮೆ ಸ್ವಾಧೀನ ಅಧಿಸೂಚನೆ ಹೊರಡಿಸಿದ ಬಳಿಕ ಅದನ್ನು ರದ್ದುಪಡಿಸಲು ಸಚಿವ ಸಂಪುಟದ ತೀರ್ಮಾನ ಅಗತ್ಯ. ಆದ್ದರಿಂದ ಈ ಪ್ರಕ್ರಿಯೆಯು ಸೂಕ್ತ ವಿಮರ್ಶೆಯೊಂದಿಗೆ, ರೈತರ ಭವಿಷ್ಯ ಮತ್ತು ಜಿಲ್ಲಾ ಅಭಿವೃದ್ಧಿಯನ್ನು ಸಮನ್ವಯಗೊಳಿಸುವ ರೀತಿಯಲ್ಲಿ ನಡೆಯಲಿದೆ” ಎಂದು ವಿವರಿಸಿದರು.
ಹಾಜರಾತಿ ವಿವರ
ಜಂಗಮಕೋಟೆ ಹೋಬಳಿಯ ಸಂಜೀವಪುರ, ಅರಿಕೆರೆ, ಬಸವಾಪಟ್ಟಣ, ಗೊಲ್ಲಹಳ್ಳಿ, ಹೊಸಪೇಟೆ, ಕೊಲಿಮೆ ಹೊಸೂರು, ತಾದೂರು, ದೇವಗಾನಹಳ್ಳಿ, ಯಣ್ಣಂಗೂರು, ತೊಟ್ಲಗಾನಹಳ್ಳಿ, ಚೊಕ್ಕಂಡಹಳ್ಳಿ, ಎದ್ದಲತಿಪ್ಪೇನಹಳ್ಳಿ ಮತ್ತು ನಡಿಪಿನಾಯಕನಹಳ್ಳಿ ಸೇರಿ ಒಟ್ಟು 1,166 ಖಾತೆದಾರರು ಉಳಿತಾಯ ಸಭೆಯಲ್ಲಿ ಭಾಗವಹಿಸಿದ್ದರು.
ಸಚಿವರ ಭರವಸೆ
ಸಭೆಯ ವೇಳೆ ಡಾ. ಎಂ.ಸಿ. ಸುಧಾಕರ್ ಅವರು ಪ್ರತಿ ಸಭಾ ಕೊಠಡಿಗೆ ತೆರಳಿ, ರೈತರೊಂದಿಗೆ ನೇರ ಸಂಭಾಷಣೆ ನಡೆಸಿದರು.
- ಕೈಗಾರಿಕಾ ಪ್ರದೇಶ ಅಭಿವೃದ್ಧಿಯಿಂದ ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆಗಳು, ಮತ್ತು ಸ್ಥಳೀಯ ಅಭಿವೃದ್ಧಿಗೆ ಉತ್ತೇಜನ ಸಿಗುತ್ತದೆ.
- ಜಮೀನು ನೀಡುವ ರೈತರ ಕುಟುಂಬದ ಸದಸ್ಯರಿಗೆ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ನೀಡುವ ಭರವಸೆ ನೀಡಲಾಗಿದೆ.
- ಜಮೀನು ಮಾರಾಟದಿಂದ ಬರುವ ಹಣದಲ್ಲಿ ಮತ್ತೊಂದು ಜಮೀನು ಖರೀದಿ ಮಾಡಿದರೆ, ತೆರಿಗೆ ವಿನಾಯಿತಿಯು ಸಿಗಲಿದೆ.
- “ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಬಲವಂತ ಇಲ್ಲ. ರೈತರ ವಿಶ್ವಾಸದ ಮೇಲೆಯೇ ಮುಂದಿನ ನಿಟ್ಟನ್ನು ತೀರ್ಮಾನಿಸಲಾಗುವುದು” ಎಂದು ಸಚಿವರು ಮತ್ತೊಮ್ಮೆ ಪುನರುಚ್ಚರಿಸಿದರು.