Sidlaghatta : ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಶಿಡ್ಲಘಟ್ಟದ ಪ್ರವಾಸಿ ಮಂದಿರದ ಆವರಣದಲ್ಲಿ ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಬುಧವಾರ ನಡೆಯಿತು. ಜನತಾ ದರ್ಶನದಲ್ಲಿ ನಾನಾ ಇಲಾಖೆಗಳಿಗೆ ಸಂಬಂಧಿಸಿದಂತೆ 182 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು.
ಶಾಸಕ ಬಿ.ಎನ್.ರವಿಕುಮಾರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರ ಉಪಸ್ಥಿತಿಯಲ್ಲಿ ನಡೆದ ಜನತಾ ದರ್ಶನದಲ್ಲಿ ಸಾರ್ವಜನಿಕರು, ರೈತರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ವೈಯಕ್ತಿಕ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ಸಲ್ಲಿಸಿದರು.
ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಕಂದಾಯ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಕೆಲಸ ಕಾರ್ಯಗಳ ವಿಳಂಬ, ಸಮಸ್ಯೆಗಳ ಬಗ್ಗೆ 182 ಅರ್ಜಿಗಳು ಬಂದಿವೆ ಎಂದರು.
ಬಂದಿರುವ ಎಲ್ಲ ಅರ್ಜಿಗಳನ್ನು ಇಲಾಖೆವಾರು ಬೇರ್ಪಡಿಸಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ನ್ಯಾಯಾಲಯದಲ್ಲಿ ಇರುವ ಪ್ರಕರಣಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗುವುದು. 15 ದಿನಗಳ ಒಳಗೆ ಅರ್ಜಿದಾರರಿಗೆ ಈ ಬಗ್ಗೆ ಮಾಹಿತಿ ರವಾನಿಸಲಾಗುವುದು ಎಂದು ಹೇಳಿದರು.
ಹಲವು ಮಂದಿ ವಿಕಲ ಚೇತನರು ತ್ರಿ ಚಕ್ರ ವಾಹನ ನೀಡುವಂತೆ ಅರ್ಜಿ ಸಲ್ಲಿಸಿದ್ದು ಸರ್ಕಾರದಿಂದ ಎಲ್ಲರಿಗೂ ಏಕ ಕಾಲದಲ್ಲಿ ತ್ರಿ ಚಕ್ರವಾಹನ ವಿತರಿಸಲು ಆಗುವುದಿಲ್ಲವಾದ್ದರಿಂದ ಶಾಸಕ ರವಿಕುಮಾರ್ ಅವರು ಮಿಕ್ಕವರಿಗೆ ವೈಯಕ್ತಿಕವಾಗಿ ತ್ರಿಚಕ್ರವಾಹನ ವಿತರಿಸಲು ಒಪ್ಪಿದ್ದು ಅವರಿಗೆ ತಾಲ್ಲೂಕಿನ ಜನತೆಯ ಪರವಾಗಿ ಅಭಿನಂದನೆಗಳು ಎಂದರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಶಿಡ್ಲಘಟ್ಟದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸಲು ಸೂಕ್ತ ಜಾಗವನ್ನು ನೀಡಿ ಮುಂದಿನ ತಿಂಗಳಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಪೂಜೆ ಸಲ್ಲಿಸಲಾಗುವುದು. ಇದಕ್ಕೆ ಸಹಕರಿಸಿದ ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ಎಂ.ಸಿ.ಸುಧಾಕರ್ ಹಾಗೂ ಡಿಸಿ ಪಿ.ಎನ್.ರವೀಂದ್ರ ಹಾಗೂ ಸಹಕರಿಸಿದ ಎಲ್ಲರಿಗೂ ಈ ತಾಲ್ಲೂಕಿನ ರೇಷ್ಮೆ ಬೆಳೆಗಾರರು, ರೀಲರುಗಳ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
ತಾಲ್ಲೂಕಿನಲ್ಲಿ ಏನೇ ಸಮಸ್ಯೆ ಇರಲಿ, ಅಭಿವೃದ್ದಿ ಕಾರ್ಯಗಳಿರಲಿ ನಮಗೆ ನಮ್ಮ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಸ್ಪಂದಿಸುತ್ತಿದ್ದು ತಾಲ್ಲೂಕಿನ ಅಭಿವೃದ್ದಿಯಲ್ಲಿ ಅವರದ್ದೂ ಸಹ ಬಹಳ ಮುಖ್ಯ ಪಾತ್ರವಿದೆ ಎಂದು ಹೇಳಿದರು.
ಇನ್ನು ಶಿಡ್ಲಘಟ್ಟ ನಗರದಲ್ಲಿ ಎರಡನೇ ಹಂತದ ಒಳ ಚರಂಡಿ ನಿರ್ಮಾಣ ಕಾಮಗಾರಿಗೆ ಬೇಕಿದ್ದು 30 ಕೋಟಿ ರೂ.ಗಳನ್ನು ನಮ್ಮ ಮನವಿ ಮೇರೆಗೆ ಪೌರಾಡಳಿತ ಸಚಿವ ಬೈರತಿ ಸುರೇಶ್ ಅವರು ನೀಡಿದ್ದು ಇನ್ನುಳಿದ 48 ಕೋಟಿ ರೂ.ಗಳನ್ನು ಎರಡನೇ ಹಂತದಲ್ಲಿ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸಿಇಒ ಪ್ರಕಾಶ್ ಜಿ.ನಿಟ್ಟಾಲಿ, ಎಸ್ಪಿ ನಾಗೇಶ್, ತಹಶೀಲ್ದಾರ್ ಬಿ.ಎನ್.ಸ್ವಾಮಿ, ಇಒ ಮುನಿರಾಜು, ನಗರಸಭೆ ಪೌರಾಯುಕ್ತ ಮಂಜುನಾಥ್ ಸೇರಿದಂತೆ ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು.