20.1 C
Sidlaghatta
Sunday, November 24, 2024

ಗ್ರಾ.ಪಂ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡಲು ಆಗ್ರಹ

- Advertisement -
- Advertisement -

J Venkatapura, Sidlaghatta : ದೇಶದ ಸಂವಿಧಾನ ಹಾಗು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಹಗುರವಾಗಿ ಮಾತನಾಡಿರುವ ಗ್ರಾ.ಪಂ ಸದಸ್ಯೆ ಶಶಿಕಲಾ ಅಂಬರೀಶ್ ರವರ ಸದಸ್ಯತ್ವವನ್ನು ಕೂಡಲೇ ರದ್ದು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಟಿ.ಎ.ಚಲಪತಿ ಒತ್ತಾಯಿಸಿದರು.

ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾ.ಪಂ ಮುಂಭಾಗ ಗುರುವಾರ ದಸಂಸ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿದ್ದು ದೇಶದ ವಿವಿಧ ರಾಜಕೀಯ ಪಕ್ಷಗಳು ಅಧಿಕಾರ ಚಲಾಯಿಸಿದ್ದು ದೇಶದ ಸುಭದ್ರತೆ ಹಾಗು ಸರ್ವತೋಮುಖ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿದೆ ಎಂದರೆ ಅದಕ್ಕೆ ಈ ದೇಶದ ಸಂವಿಧಾನವೇ ಮುಖ್ಯ ಕಾರಣವಾಗಿದೆ. ಇಂತಹ ಸಂವಿಧಾನದಡಿಯಲ್ಲಿ ಗ್ರಾ.ಪಂ ಸದಸ್ಯೆಯಾಗಿ ಆಯ್ಕೆಯಾಗಿರುವ ಗ್ರಾ.ಪಂ ಸದಸ್ಯೆ ಶಶಿಕಲಾ ಸಂವಿಧಾನ ಹಾಗು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನಾರ್ಹ ಎಂದರು.

ಕಳೆದ ವರ್ಷ ದೇಶಾದ್ಯಂತ ಸಂವಿಧಾನ ಜಾಗೃತಿ ಜಾಥ ನಡೆಸುವ ಮೂಲಕ ಸಂವಿಧಾನ ಹಾಗು ಡಾ.ಬಿ.ಆರ್.ಅಂಬೇಡ್ಕರ್‌ರವರಿಗೆ ಗೌರವ ಸಲ್ಲಿಸುವ ಕೆಲಸವನ್ನು ಇಡೀ ರಾಷ್ಟ್ರವೇ ಮಾಡಿತ್ತಾದರೂ ಇಂತಹ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಇರುವುದು ಹಾಗೂ ನಂತರ ನಡೆದ ಸಭೆಯಲ್ಲಿ ಜಾಗೃತಿ ಜಾಥಗೆ ಇಷ್ಟು ಹಣ ಏಕೆ ಖರ್ಚು ಮಾಡಿದ್ದೀರಿ, ಜಾಥ ಏತಕ್ಕಾಗಿ ಮಾಡಿದ್ದೀರಿ ಎಂದು ಕೇಳಿರುವುದು ಸಂವಿಧಾನ ಹಾಗು ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಮಾಡಿರುವ ಅಪಮಾನ ಹಾಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇವರ ಗ್ರಾ.ಪಂ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ನಾಗೇಶ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಸಂದ್ರ ಗ್ರಾಮದಿಂದ ಆಯ್ಕೆಯಾಗಿರುವ ಶಶಿಕಲಾ ಅಂಬರೀಶ್ ಅವರು ಬೆಂಗಳೂರಲ್ಲಿ ವಾಸಿಸುತ್ತಿದ್ದು ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಯಾವುದೆ ಸಭೆಗೂ ಅವರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಸಭೆ ಮುಗಿಯುವ ಸಮಯದಲ್ಲಿ ಬರುತ್ತಾರೆ. ತನ್ನೊಂದಿಗೆ ತನ್ನ ಚಿಕ್ಕ ಮಗಳನ್ನು ಕರೆದುಕೊಂಡು ಬಂದು ಮಗಳ ಕೈಗೆ ಮೊಬೈಲ್ ಕೊಟ್ಟು ಸಭೆಯ ವಿಡಿಯೋ ಮಾಡಲು ಹೇಳುತ್ತಾರೆ. ಆಕೆ ಬರುವುದಕ್ಕೂ ಮೊದಲೆ ಚರ್ಚೆಯಾದ ವಿಷಯಗಳನ್ನು ಮತ್ತೆ ಚರ್ಚೆ ಮಾಡಲು ಹೇಳುತ್ತಾರೆ. ನಾನು ಇಲ್ಲದಾಗ ತೆಗೆದುಕೊಂಡ ತೀರ್ಮಾನಗಳನ್ನು ನಾನು ಒಪ್ಪಲ್ಲ. ಹಾಗಾಗಿ ಸಭೆಯನ್ನು ಮುಂದೂಡಿ ಇಲ್ಲವೇ ಮೊದಲಿನಿಂದ ನಡೆಸಿ ಎಂದು ಹಠಕ್ಕೆ ಬೀಳುತ್ತಾರೆ.

ಇದು ಕೇವಲ ಒಂದು ಸಭೆಯಲ್ಲಲ್ಲ ಬಹುತೇಕ ಎಲ್ಲ ಸಭೆಗಳಲ್ಲೂ ಇದು ಪುನರಾವರ್ತನೆ ಆಗುತ್ತಿದೆ. ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ನರೇಗಾ ಯೋಜನೆಯಡಿ ಲಕ್ಷಾಂತರ ರೂಪಾಯಿಗಳ ಅಭಿವೃದ್ದಿ ಕಾರ್ಯಗಳು ನಡೆದಿವೆ. ಆದರೆ ಬೈರಸಂದ್ರದಲ್ಲಿ ಮಾತ್ರ ನರೇಗಾದಡಿ ಅಭಿವೃದ್ದಿ ಕಾರ್ಯಗಳು ಆಗಿಲ್ಲ. ಇವರ ದುರ್ವರ್ತನೆಯಿಂದ ಬೈರಸಂದ್ರ ಗ್ರಾಮದಲ್ಲಿ ಅಭಿವೃದ್ದಿ ಕಾರ್ಯಗಳು ಆಗಿಲ್ಲ. ಸಭೆಗಳಲ್ಲಿನ ದುರ್ನಡತೆ, ಬ್ಲಾಕ್ ಮೇಲ್ ತಂತ್ರ, ಅಭಿವೃದ್ದಿಗೆ ಅಸಹಕಾರ ನೀಡುತ್ತಿರುವ ಶಶಿಕಲಾ ವಿರುದ್ದ ಈಗಾಗಲೇ ಸಂಬಂಧಪಟ್ಟವರಿಗೆ ದೂರು ನೀಡಲಾಗಿದೆ ಎಂದರು.

ದಲಿತ ಮುಖಂಡ ಡಿ.ದೇವರಾಜು ಮಾತನಾಡಿ, ಗ್ರಾ.ಪಂ ಆವರಣದಲ್ಲಿ ಮೇಲಧಿಕಾರಿಗಳ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಗ್ರಾಮದ ದಲಿತರ ಕುಂದು ಕೊರತೆಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ಸಮಯದಲ್ಲಿ, ದಲಿತ ಮುಖಂಡರನ್ನು ಸಭೆಗೆ ಏಕೆ ಆಹ್ವಾನಿಸಿದ್ದೀರಿ, ಸಭೆಯಿಂದ ಹೊರ ಕಳುಹಿಸಿ ಎಂದು ಹೇಳುವ ಮೂಲಕ ದಲಿತ ವಿರೋಧಿ ನೀತಿ ಅನುಸರಿಸುವ ಇಂತಹ ಸದಸ್ಯೆಯ ಸದಸ್ಯತ್ವವನ್ನು ಕೂಡಲೆ ರದ್ದು ಪಡಿಸಬೇಕು ಎಂದು ಒತ್ತಾಯಿಸಿ ತಾ.ಪಂ ಇಓ ಹೇಮಾವತಿ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ತಾ.ಪಂ ಇಓ ಹೇಮಾವತಿ ಮಾತನಾಡಿ ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಜೊತೆಗೆ ಮೆಲಾಧಿಕಾರಿಗಳ ಗಮನಕ್ಕೆ ತಂದು ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಘಟನಾ ಸಂಚಾಲಕ ಲಕ್ಕೇನಹಳ್ಳಿ ವೆಂಕಟೇಶ್, ಹುಜಗೂರು ವೆಂಕಟೇಶ್, ಪದಾಧಿಕಾರಿಗಳಾದ ದೊಡ್ಡತಿರುಮಳಯ್ಯ, ಡಿ.ಎಂ.ವೆಂಕಟೇಶ್, ಚನ್ನಕೇಶವ, ಕೃಷ್ಣಪ್ಪ, ರವಿ ಸ್ಥಳೀಯ ಮುಖಂಡರಾದ ಮಿತ್ತನಹಳ್ಳಿ ಹರೀಶ್ ಹಾಜರಿದ್ದರು.

For Daily Updates WhatsApp ‘HI’ to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!