Nagamangala, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆ-ನಾಗಮಂಗಲ ರಸ್ತೆಯ ಎದ್ದಲತಿಪ್ಪೇನಹಳ್ಳಿ ಗೇಟ್ ಬಳಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಸುಮಾರು 156 ಲೀಟರ್ ಗೋವಾ ಮದ್ಯ ಹಾಗೂ ಮಾರುತಿ ಓಮ್ನಿ ಕಾರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸೋಮವಾರ ತಡರಾತ್ರಿ ಜಪ್ತಿ ಮಾಡಿದ್ದಾರೆ.
ಅಬಕಾರಿ ಅಪರ ಆಯುಕ್ತ, ಜಂಟಿ ಆಯುಕ್ತ, ಹಾಗೂ ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಚಿಂತಾಮಣಿ ಉಪ ವಿಭಾಗದ ಉಪ ಅಧೀಕ್ಷಕರ ನೇತೃತ್ವದಲ್ಲಿ ಜಂಗಮಕೋಟೆ ಕ್ರಾಸ್ ಬಳಿ ಅಬಕಾರಿ ಅಧಿಕಾರಿಗಳ ತಂಡ ಗಸ್ತು ತಿರುಗುವಾಗ ಖಚಿತ ಮಾಹಿತಿ ಲಭಿಸಿದ್ದು, ಈ ಮೇರೆಗೆ ಅವರು ಹೊಸಪೇಟೆ-ನಾಗಮಂಗಲ ರಸ್ತೆಯ ಎದ್ದಲತಿಪ್ಪೇನಹಳ್ಳಿ ಗೇಟ್ ಬಳಿ ಮಾರುತಿ ಓಮ್ನಿ ಕಾರಿನ ಮೇಲೆ ದಾಳಿ ನಡೆಸಿದ್ದಾರೆ.
ಪರಿಶೀಲನೆಯ ವೇಳೆ, ಕಾರಿನೊಳಗೆ ಗೋವಾ ರಾಜ್ಯದಲ್ಲಿ ಉತ್ಪಾದನೆಯಾದ 18 ಬಾಕ್ಸ್ ಗಳಲ್ಲಿ ಸುಮಾರು 156 ಲೀಟರ್ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದ್ದು, ಮಾರುತಿ ಓಮ್ನಿ ಕಾರಿನೊಂದಿಗೆ ಜಪ್ತಿ ಮಾಡಲಾಗಿದೆ. ಪರಾರಿಯಾದ ಆರೋಪಿಗಳಾದ ಎಸ್.ರವಿಚಂದ್ರನ್ ಬಿನ್ ಆರ್.ಸುಬ್ರಮಣಿ ಮತ್ತು ಬೆನಕ್‌ರಾಜ್ ಬಿನ್ ಆರ್.ಎನ್.ಉಮೇಶ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಚಿಂತಾಮಣಿ ಉಪ ವಿಭಾಗದ ಉಪ ಅಧೀಕ್ಷಕ ಜಿ.ಎಸ್.ಪಾಟೀಲ್, ಅಬಕಾರಿ ನಿರೀಕ್ಷಕರು ಮಂಜುಳ, ರೇಣುಕಾ, ರಾಮು, ಕೆ.ಸಿ.ನಾಗೇಂದ್ರಸಿಂಗ್, ಉಪ ನಿರೀಕ್ಷಕ ದೇವರಾಜ್, ಮುಖ್ಯ ಪೇದೆಗಳು ಮೋಹನ್, ನಿತಿನ್, ಹಾಗೂ ಪೇದೆ ಶಿವಸ್ವಾಮಿ ಭಾಗವಹಿಸಿದ್ದರು.