Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಇಬ್ಬರು ನಕಲಿ ವೈದ್ಯರಿಗೆ ಜಿಲ್ಲಾಧಿಕಾರಿ ದಂಡ ವಿಧಿಸಿದ್ದು, ಇನ್ನು ಮುಂದೆ ಅವರು ಯಾವುದೇ ಸ್ಥಳದಲ್ಲೂ ಕ್ಲಿನಿಕ್ ತೆರೆಯಬಾರದು ಎಂಬ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಜಿಲ್ಲೆಯಲ್ಲಿ ನಕಲಿ ವೈದ್ಯರಿಗೆ ದಂಡ ವಿಧಿಸಿರುವ ಮೊದಲ ಪ್ರಕರಣ ಇದಾಗಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ ಅವರ ನೇತೃತ್ವದ ತಂಡ ಸಾದಲಿ ಮತ್ತು ಬಶೆಟ್ಟಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿ ನಕಲಿ ವೈದ್ಯರು ನಡೆಸುತ್ತಿದ್ದ ಕ್ಲಿನಿಕ್‌ಗಳನ್ನು ಮುಚ್ಚಿಸಿತ್ತು. ಈ ಕುರಿತಂತೆ ಸಲ್ಲಿಸಲಾದ ದೋಷಾರೋಪ ಪಟ್ಟಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಸಾದಲಿ ಗ್ರಾಮದ ಎಸ್.ವಿ. ಸಹದೇವ್ ಅವರಿಗೆ ₹5,000 ದಂಡ, ಬಶೆಟ್ಟಹಳ್ಳಿಯ ಎಲ್. ಲೋಕನಾಥರೆಡ್ಡಿ ಅವರಿಗೆ ₹50,000 ದಂಡ ವಿಧಿಸಿ, ಜೀವನ ಪರ್ಯಂತ ವೈದ್ಯಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ಆದೇಶಿಸಿದ್ದಾರೆ.
ಈ ಕುರಿತು ಮಾತನಾಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ, “ಜಿಲ್ಲಾಧಿಕಾರಿಯ ಈ ತೀರ್ಪು ಜಿಲ್ಲೆಯಲ್ಲಿನ ನಕಲಿ ವೈದ್ಯರಿಗೆ ಎಚ್ಚರಿಕೆಯ ಸಂದೇಶ. ಆಯುಷ್, ಯುನಾನಿ, ಅಲೋಪತಿ ಎಂಬ ಯಾವುದೇ ವಿಭಾಗದ ವೈದ್ಯರೂ ತಮ್ಮ ವಿದ್ಯಾರ್ಹತೆಗೆ ತಕ್ಕಂತೆ KPME (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ) ಅಡಿಯಲ್ಲಿ ನೋಂದಣಿ ಪ್ರಮಾಣ ಪತ್ರ ಪಡೆಯಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದುವರೆಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಆರು ನಕಲಿ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ” ಎಂದು ತಿಳಿಸಿದರು.