Dibburahalli, Sidlaghatta : ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗೋವನ್ನು ಸಾಗಿಸುತ್ತಿದ್ದವರನ್ನು ಭಜರಂಗದಳ ಕಾರ್ಯಕರ್ತರು ತಡೆಯುವ ಮೂಲಕ ಗೋವುಗಳನ್ನು ರಕ್ಷಿಸಿರುವ ಘಟನೆ ನಡೆದಿದೆ. ರಕ್ಷಿಸಲಾದ ಹಸುಗಳು ಹಾಗೂ ಎಮ್ಮೆಗಳನ್ನು ಗುಡಿಬಂಡೆ ತಾಲ್ಲೂಕಿನ ನಡುವನಹಳ್ಳಿಯ “ನಮ್ಮನಾಡು ಗೋಶಾಲೆ”ಗೆ ದಿಬ್ಬೂರಹಳ್ಳಿ ಪೊಲೀಸರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಸಾದಲಿ ಹೋಬಳಿಯ ಸೊಣಗಾನಹಳ್ಳಿ ಬಳಿ ವಾಹನ ತಡೆದ ಭಜರಂಗದಳದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು, ಗೋವುಗಳ ಸುರಕ್ಷತೆಗಾಗಿ ಕ್ರಮ ಕೈಗೊಂಡರು.
ಭಜರಂಗದಳದ ಜಿಲ್ಲಾ ಸಂಚಾಲಕ ಅಮರೇಶ್ ಅವರು ಮಾತನಾಡಿ, “ಜಿಲ್ಲೆಯಲ್ಲಿ ಏಕದಿನವೂ ಬಿಡದೆ ಅಕ್ರಮವಾಗಿ ಗೋವುಗಳನ್ನು ಖಸಾಯಿಖಾನೆಗೆ ಸಾಗಿಸಲಾಗುತ್ತಿದೆ. ಕಳೆದ 10ರಂದು ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 19 ಗೋವುಗಳನ್ನು ನಾವು ರಕ್ಷಣೆ ಮಾಡಿದ್ದೆವು. ಈಗ 38 ಜಾನುವಾರುಗಳನ್ನು ಅಕ್ರಮವಾಗಿ ಕೊಂಡೊಯ್ಯುತ್ತಿದ್ದ ವಿಷಯ ಸತ್ಯವಾಗಿದೆ. ಆದರೆ ಪೊಲೀಸ್ ಇಲಾಖೆ ಇದನ್ನೇ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ,” ಎಂದು ಆರೋಪಿಸಿದರು.
ಅವರು ಮುಂದುವರೆದು, “ಆಂಧ್ರಪ್ರದೇಶದ ಕಡೆಗಳಿಂದ ಜಿಲ್ಲೆಗೆ ಪ್ರವೇಶಿಸುವ ಎಲ್ಲ ಮಾರ್ಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಬೇಕು. ರಾಜ್ಯದಲ್ಲಿ ಗೋಮಾಂಸ ನಿಷೇಧವಿದ್ದರೂ ಗೋ ಹತ್ಯೆ ಹಾಗೂ ಮಾಂಸ ಮಾರಾಟ ನಿಂತಿಲ್ಲ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಈ ಕುರಿತು ತ್ವರಿತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಭಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ಇತರ ಸಂಘಟನೆಗಳು ಉಗ್ರ ಹೋರಾಟ ನಡೆಸುವಂತಹ ಪರಿಸ್ಥಿತಿ ಉದ್ಭವಿಸುತ್ತದೆ,” ಎಂದು ಎಚ್ಚರಿಸಿದರು.
ಈ ವೇಳೆ ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಉಪಾಧ್ಯಕ್ಷ ಲಕ್ಷ್ಮೀಸಾಗರ ಸಂತೋಷ್, ಭಜರಂಗದಳ ಸಂಯೋಜಕ ಗಗಜ್, ಸಹ ಸಂಯೋಜಕ ರಾಹುಲ್, ಮಿಟ್ಟೇಮರಿಯ ಬಿಜೆಪಿ ಕಾರ್ಯಕರ್ತ ಸತೀಶ್ ಹಾಗೂ ಬಾಗೇಪಲ್ಲಿ ನಗರ ಸಂಯೋಜಕ ಕಲ್ಯಾಣ್ ಅವರು ಉಪಸ್ಥಿತರಿದ್ದರು.