Sidlaghatta : ಸುಗುಟೂರು ರಸ್ತೆಯಿಂದ ಜಂಗಮಕೋಟೆ ವರೆಗೆ, ಜಂಗಮಕೋಟೆ ಬಾಲಾಜಿ ವಿದ್ಯಾನಿಕೇತನ ಶಾಲೆ ವಿದ್ಯಾರ್ಥಿಗಳೊಂದಿಗೆ ಮಾನವ ಕಳ್ಳ ಸಾಗಾಣಿಕೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಮೌನ ಮೆರವಣಿಗೆಯನ್ನು ಅಕ್ಟೋಬರ್ 19 ಶನಿವಾರ ಹಮ್ಮಿಕೊಂಡಿರುವುದಾಗಿ ರಾಜ್ಯ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿ ಮೂವ್ಮೆಂಟ್ ಇಂಡಿಯಾ, ಕರ್ನಾಟಕ ವಲಯ ರಾಷ್ಟ್ರೀಯ ಯುವ ಯೋಜನೆ, ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಜಂಗಮಕೋಟೆಯ ಬಾಲಾಜಿ ವಿದ್ಯಾನಿಕೇತನ ಮತ್ತು ಗ್ರಾಮ ಜ್ಯೋತಿ ಸೊಸೈಟಿ ಮದನಪಲ್ಲಿ ಅವರ ಸಹಯೋಗದೊಂದಿಗೆ ಅಕ್ಟೋಬರ್ 19 ಶನಿವಾರ ದಂದು ಬೆಳಿಗ್ಗೆ 09 ಗಂಟೆಯಿಂದ ಮಾನವ ಕಳ್ಳ ಸಾಗಾಣಿಕೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಮೌನ ಮೆರವಣಿಗೆಯನ್ನು ಹಮ್ಮಿಕೊಂಡಿದ್ದೇವೆ.
ದೇಶಾದ್ಯಂತ ವಿವಿಧ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ಸರಿ ಸುಮಾರು ವಿಭಿನ್ನ 110 ಸ್ಥಳಗಳಲ್ಲಿ, ಏಕಕಾಲದಲ್ಲಿ, ಮಾನವ ಕಳ್ಳ ಸಾಗಾಣಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೌನ ನಡಿಗೆಯನ್ನು ಆಯೋಜಿಸಲಾಗಿದೆ. ಈ ಮೌನ ನಡೆಗೆಯ ಉದ್ದೇಶ ಮಾನವ ಕಳ್ಳ ಸಾಗಾಣಿಕೆಯ ನಿರ್ಮೂಲನೆ, ಅಂದರೆ ಮಕ್ಕಳನ್ನು ಅಪಹರಿಸಿ ಭಿಕ್ಷಾಟನೆ ಹಾಗೂ ಇತರೆ ಕೆಲಸಗಳಲ್ಲಿ ತೊಡಗಿಸಿ ಕೊಳ್ಳುವುದು.
ಮಾನವರನ್ನು ಹಾಗೂ ಹಿರಿಯ ನಾಗರಿಕರನ್ನು ಅಪಹರಿಸಿ ಅವರ ಅಂಗಾಂಗಗಳನ್ನು ಪಡೆದುಕೊಳ್ಳುವುದು ಹಾಗೂ ಹೆಣ್ಣು ಮಕ್ಕಳ ಅಪಹರಣದ ಬಗ್ಗೆ ವಿಶೇಷ ಜನಜಾಗೃತಿ ಮೂಡಿಸುವುದಾಗಿದೆ. ಈ ಬಗ್ಗೆ ಬಿತ್ತಿ ಪತ್ರದೊಂದಿಗೆ ಈ ಮೌನ ಮೆರವಣಿಗೆ ಆಯೋಜಿಸಲಾಗಿದೆ. ತಮ್ಮ ಬಳಿ ಅಪರಿಚಿತ ಅಥವಾ ಯಾರಾದರೂ ಅನುಮಾನದ ವ್ಯಕ್ತಿಗಳು ಕಂಡು ಬಂದಲ್ಲಿ ಟೋಲ್ ಫ್ರೀ ಸಂಖ್ಯೆ 100 ಅಥವಾ ಚೈಲ್ಡ್ ಲೈನ್ ಸಂಖ್ಯೆ 1098ಗೆ ತಕ್ಷಣವೇ ತಿಳಿಸುವ ಕುರಿತು ಜನ ಜಾಗೃತಿ ಮೂಡಿಸಲಾಗುವುದು ಎಂದರು.