Sidlaghatta : ಮಾನವ ಕಳ್ಳಸಾಗಾಣಿಕೆಯ ಬಗ್ಗೆ ಎಲ್ಲರಲ್ಲೂ ಮೊದಲು ಅರಿವು ಮೂಡಿಸಬೇಕೆಂದು ಜಂಗಮಕೋಟೆಯ ಬಾಲಾಜಿ ವಿದ್ಯಾನಿಕೇತನದ ಅಧ್ಯಕ್ಷ ಆರ್. ಮುನಿರಾಜು ತಿಳಿಸಿದರು.
ಜಂಗಮಕೋಟೆಯ ಬಾಲಾಜಿ ವಿದ್ಯಾನಿಕೇತನದ ಆವರಣದಲ್ಲಿ ಮಹಾರಾಷ್ಟ್ರ ರಾಜ್ಯದ ಮುಂಬೈ ನಗರದ ದಿ ಮೂಮೆಂಟ್ ಇಂಡಿಯಾ, ಕರ್ನಾಟಕ ವಲಯ ರಾಜ್ಯ ರಾಷ್ಟ್ರೀಯ ಯುವ ಯೋಜನೆ, ಮತ್ತು ಆಂಧ್ರಪ್ರದೇಶದ ಮದನಪಲ್ಲಿಯ ಗ್ರಾಮ ಜ್ಯೋತಿ ಸೊಸೈಟಿ ಇವರ ಸಹಯೋಗದೊಂದಿಗೆ ಮಾನವ ಕಳ್ಳಸಾಗಾಣಿಕೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಮೌನ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ನವಜಾತ ಶಿಶುವಿನಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯಸ್ಸಿನ ಜನರು ಈ ಮಾನವ ಕಳ್ಳಸಾಗಣೆಗೆ ಒಳಗಾಗುತ್ತಿದ್ದಾರೆ. ಮಾನವ ಕಳ್ಳಸಾಗಾಣಿಕೆಯು ಒಂದು ದೊಡ್ಡ ಸಾಮಾಜಿಕ ಪಿಡುಗಾಗಿದೆ. ಮಕ್ಕಳನ್ನು ಬಲವಂತದ ದುಡಿಮೆಗೆ ಒಳಪಡಿಸಲಾಗುತ್ತದೆ.
ಆದ್ದರಿಂದ ಇಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ನಮ್ಮ ಸಮಾಜವನ್ನು ಮಾನವ ಕಳ್ಳಸಾಗಾಣಿಕೆಯಿಂದ ಮುಕ್ತಸಮಾಜವನ್ನಾಗಿ ಮಾಡುವಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಮೌನನಡಿಗೆಯ ಬಿತ್ತಿಪತ್ರಗಳನ್ನು ಬಾಲಾಜಿ ವಿದ್ಯಾನಿಕೇತನದ ಆಡಳಿತಾಧಿಕಾರಿ ಪ್ರಭಪ್ರಶಾಂತ್ ಸ್ವಯಂ ಸೇವಕರಿಗೆ ವಿತರಿಸಿ ಮಾತನಾಡಿ, ಮೊದಲು ನಾವೆಲ್ಲರೂ ಜಾಗೃತರಾಗಿರಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಹಾಗೂ ಎಲ್ಲಾದರೂ ಮಾನವಕಳ್ಳಸಾಗಾಣಿಕೆಯ ಬಗ್ಗೆ ಮಾಹಿತಿ ತಮಗೆ ದೊರೆತರೆ ಆ ಕೂಡಲೇ 1098 ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ದೂರು ನೀಡಿ. ಇಂತಹ ಕಾರ್ಯಕ್ರಮದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸೋಣ ಎಂದರು.
ಮಾನವ ಕಳ್ಳಸಾಗಾಣಿಕೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರತಿಜ್ಞಾವಿಧಿ ಬೋಧಿಸಿದ ರಾಜ್ಯ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ ಮಾತನಾಡಿ, ಮನುಷ್ಯ ಮನುಷ್ಯನಾಗಿ ಕಾಣದೆ ಮಾರಾಟದ ವಸ್ತುವಾಗಿ ಕಾಣುತ್ತಿರುವುದು ಇಂದು ದೊಡ್ಡ ದುರಂತವಾಗಿದ್ದು, ಜಗತ್ತಿನಲ್ಲಿ ಇಂದು ಮಾನವ ಮತ್ತು ಮಾನವನ ಅಂಗಾಂಗಗಳನ್ನು ಮಾರಾಟ ಮಾಡಲಾಗುತ್ತಿದೆ.
ಆದ್ದರಿಂದ ನಾವೆಲ್ಲರು ಸೇರಿ ಎಲ್ಲರಲ್ಲೂ ಜಾಗೃತಿ ಮೂಡಿಸಿ ಈ ಮಾನವ ಕಳ್ಳಸಾಗಾಣಿಕೆಯನ್ನು ಬುಡಮಟ್ಟದಿಂದ ಕಿತ್ತೊಗೆಯಲು ಹಗಲಿರುಳು ಶ್ರಮಿಸಬೇಕಾಗಿದೆ ಎಂದು ಹೇಳಿದರು. 250 ಕ್ಕೂ ಹೆಚ್ಚು ಸ್ವಯಂ ಸೇವಕರು ಕಪ್ಪು ಟೀಶರ್ಟ್ ಗಳನ್ನು ಧರಿಸಿ ಮತ್ತು ಭಿತ್ತಿಪತ್ರಗಳನ್ನು ಹಿಡಿದು ಈ ಮೌನನಡಿಗೆಯಲ್ಲಿ ಭಾಗಿಯಾಗಿದ್ದರು.
ಜಂಗಮಕೋಟೆಯ ಬಾಲಾಜಿ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯಶಿಕ್ಷಕಿ ಮಾಲ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹರೀಶ್, ಸಹಶಿಕ್ಷಕಿ ಪುಷ್ಪ, ಬೆಂಗಳೂರಿನ ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯ ನಿರ್ದೇಶಕ ಬಿಜ್ಜವಾರ ಬಿ.ಕೆ.ಮಧು, ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ರಾಷ್ಟ್ರೀಯ ಸೇವಾ ಯೋಜನೆಯ ಎನ್.ಎಸ್.ಎಸ್ ಸ್ವಯಂ ಸೇವಕರಾದ ಆರ್.ಬಿ.ಮುನೇಗೌಡ, ಡಿ.ಯಶ್ವಂತ್, ಪಿ.ನಂದನ್ , ಎಂ. ನಿತಿನ್, ಎಚ್.ವಿ.ಲಿಖಿತ್ ಕುಮಾರ್ ಎಚ್.ಆರ್. ನಿತಿನ್ ಕುಮಾರ್ ಹಾಜರಿದ್ದರು.