ತಾಲ್ಲೂಕಿನಲ್ಲಿ ವಾರದ ಸಂತೆಗಳು ನಡೆಯುವ ಎಲ್ಲ ಕಡೆಯೂ ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯಡಿ ಮಹಿಳಾ ಒಕ್ಕೂಟಗಳ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಒದಗಿಸುವ ನಿಟ್ಟಿನಲ್ಲಿ ಮಾಸಿಕ ಸಂತೆಗಳನ್ನು ನಡೆಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಇಒ ಚಂದ್ರಕಾಂತ್ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯಡಿ ಮಹಿಳಾ ಒಕ್ಕೂಟಗಳ ಸದಸ್ಯರ ಉತ್ಪನ್ನಗಳ ಮಾರಾಟಕ್ಕಾಗಿ ಹಮ್ಮಿಕೊಂಡಿದ್ದ ಮಾಸಿಕ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರದಿಂದ ಒಕ್ಕೂಟಗಳಿಗೆ ನೀಡುವ ಹಣದಿಂದ ಒಕ್ಕೂಟದ ಸದಸ್ಯರು ಸ್ವತಃ ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಮಾಸಿಕ ಸಂತೆ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ. ಇಲ್ಲಿ ಒಕ್ಕೂಟದ ಸದಸ್ಯರು ಉತ್ಪಾಸುವ ಆಹಾರ ಪದಾರ್ಥಗಳು ಹಾಗೂ ದಿನ ಬಳಕೆಯ ವಸ್ತುಗಳನ್ನು ಮಾರಾಟ ಮಾಡಬಹುದು ಎಂದರು.
ತಾಲ್ಲೂಕಿನಲ್ಲಿ ವಾರದ ಸಂತೆಗಳು ನಡೆಯುವ ಕಡೆ ಮಾಸಿಕ ಸಂತೆಯನ್ನು ಹಮ್ಮಿಕೊಳ್ಳುತ್ತೇವೆ. ನಾಲ್ಕೈದು ಗ್ರಾಮಪಂಚಾಯಿತಿಗಳನ್ನು ಒಂದುಗೂಡಿಸಿ ಒಂದು ಕಡೆ ಮಾಸಿಕ ಸಂತೆ ಏರ್ಪಡಿಸಲು ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.
ಹೊಸಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್‌ಗೌಡ ಮಾತನಾಡಿ, ಮಹಿಳೆಯರು ಉತ್ಪಾದಿಸಿದ ದಿನವಹಿ ಬಳಕೆಯ ವಸ್ತುಗಳಿಗೆ ಮಾರುಕಟ್ಟೆಯನ್ನು ಕಲ್ಪಿಸಿಕೊಟ್ಟಲ್ಲಿ ಮಹಿಳಾ ಸಂಘಗಳ ಆರ್ಥಿಕ ವಹಿವಾಟು ಪ್ರಮಾಣ ಹೆಚ್ಚಲಿದೆ, ವ್ಯವಹಾರಿಕ ಜ್ಞಾನವೂ ಹೆಚ್ಚಲಿದೆ ಎಂದು ತಿಳಿಸಿದರು.
ಮಹಿಳಾ ಸಂಘಗಳ ಸದಸ್ಯರು ಉತ್ಪಾದಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯ ಸೌಲಭ್ಯದ ಕೊರತೆಯಿದೆ. ಹಾಗಾಗಿ ಅನೇಕ ಮಹಿಳಾ ಸಂಘಗಳು ಈ ವಿಷಯದಲ್ಲಿ ಹಿಂದೇಟು ಹಾಕುತ್ತಾರೆ ಎಂದರು.
ನಮ್ಮ ಪಂಚಾಯಿತಿಯಿಂದ ಮಹಿಳಾ ಸಂಘಗಳ ಉತ್ಪನ್ನಗಳ ಮಾರಾಟಕ್ಕೆ ಅಗತ್ಯವಾದ ಎಲ್ಲ ಅನುಕೂಲಗಳನ್ನು ಕಲ್ಪಿಸುತ್ತೇವೆ. ಪ್ರತಿ ಮಂಗಳವಾರ ವಾರದ ಸಂತೆ ನಡೆಯಲಿದ್ದು ಆ ದಿನ ಮಹಿಳಾ ಸಂಘಗಳ ಉತ್ಪನ್ನಗಳಿಗೆ ಮಾಸಿಕ ಸಂತೆ ನಡೆಸಲು ಪಂಚಾಯಿತಿಯಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ಹೇಳಿದರು.
15 ಮಳಿಗೆಗಳನ್ನು ಸ್ಥಾಪಿಸಿ ಉಪ್ಪಿನ ಕಾಯಿ, ಸಾಂಬಾರು ಪದಾರ್ಥಗಳು, ಹಪ್ಪಳ, ಸಂಡಿಗೆ, ತರಕಾರಿ ಇನ್ನಿತರೆ ನಾನಾ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡಲಾಯಿತು. ಹೊಸಪೇಟೆ, ಜೆ.ವೆಂಕಟಾಪುರ, ಜಂಗಮಕೋಟೆ, ಭಕ್ತರಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಸದಸ್ಯರು ಮಾರಾಟದಲ್ಲಿ ಭಾಗವಹಿಸಿದ್ದರು.
ಎನ್‌ಎಲ್‌ಆರ್‌ಎಂ ವಿಷಯ ನಿರ್ವಾಹಕಿ ಕನಕಮ್ಮ, ಜಿಲ್ಲಾ ವ್ಯವಸ್ಥಾಪಕ ಮೋಹನ್, ವಲಯ ಮೇಲ್ವಿಚಾರಕ ನರಸಿಂಹರಾಜು, ಬಾಲರಾಜು, ಹೊಸಪೇಟೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಹಾಲಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊಸಪೇಟೆ ಮುನಿಯಪ್ಪ, ನಲ್ಲೇನಹಳ್ಳಿ ರಾಮಕೃಷ್ಣಪ್ಪ ಹಾಜರಿದ್ದರು.