Sidlaghatta : ರೈತಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಹೋರಾಟಗಾರ್ತಿ ಜಯಶ್ರೀ ಗುರನ್ನವರ್ ಅವರ ನಿಧನದಿಂದಾಗಿ ರಾಜ್ಯದ ರೈತರಿಗೆ ತುಂಬಲಾರದ ನಷ್ಟವಾಗಿದೆ ಎಂದು ರಾಜ್ಯ ರೈತ ಸಂಘ ಹಾಗು ಹಸಿರುಸೇನೆ (ಸಾಮೂಹಿಕ ನಾಯಕತ್ವ) ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಗುರುವಾರ ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ರಾಜ್ಯ ಸಮಿತಿಯ ಮಹಿಳಾ ಘಟಕದ ರಾಜ್ಯ ಸಂಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜಯಶ್ರೀ ಗುರನ್ನವರ್ ಬೆಳಗಾವಿ ಭಾಗದ ರೈತ ನಾಯಕಿಯಾಗಿ ಕಬ್ಬಿಗೆ ಹೆಚ್ಚಿನ ಬೆಲೆ ಕೊಡಿಸಲು ಸುವರ್ಣ ಸೌಧದ ಬೀಗ ಹೊಡೆದು ನೂರಾರು ರೈತರೊಂದಿಗೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ದಿಟ್ಟ ಹೋರಾಟಗಾರ್ತಿಯಾಗಿದ್ದರು. ಇಂತಹ ಹೋರಾಟಗಾರ್ತಿಯೊಬ್ಬರು ಅತಿ ಚಿಕ್ಕ ವಯಸ್ಸಿಗೆ ನಿಧನರಾಗಿರುವುದು ತುಂಬಾ ನೋವಿನ ಸಂಗತಿ ಎಂದರು.
ನಿನ್ನೆ ನಿಧನರಾದ ರೈತ ನಾಯಕಿ ಜಯಶ್ರೀ ಗುರನ್ನವರ್ ರೈತರಿಗೆ ಮಾಡಿರುವ ಸೇವೆ ಅಪಾರವಾದದ್ದು. ರೈತರ ಪರ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಅವರು ಪ್ರತಿಯೊಬ್ಬರಿಗೂ ಆದರ್ಶವಾಗಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಎ.ಎನ್.ಮುನೇಗೌಡ, ಕಾರ್ಯದರ್ಶಿ ನವೀನಚಾರ್ಯ, ಪದಾಧಿಕಾರಿಗಳಾದ ಆಂಜಿನಪ್ಪ, ಎಸ್.ಎನ್.ಮಾರಪ್ಪ, ದ್ಯಾವಪ್ಪ, ನಾರಾಯಣಸ್ವಾಮಿ, ಮುನಿಯಪ್ಪ, ನಾಗೇಶ್ ಹಾಜರಿದ್ದರು.