Hittalahalli, Sidlaghatta : 12 ಎಕರೆ ಪ್ರದೇಶದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಿಸಲು ಸರ್ಕಾರ 200 ಕೋಟಿ ರೂ ಮಂಜೂರು ಮಾಡಿದೆ. ನೆರೆಯ ಜಿಲ್ಲೆ ಹಾಗೂ ರಾಜ್ಯಗಳಿಂದ ಗೂಡು ಬೆಳೆದು ರೈತರು ಇಲ್ಲಿಗೆ ಬರುವರು. ಸ್ಥಳೀಯವಾಗಿ ರೇಷ್ಮೆ ಬೆಳೆಗಾರರು ಹೆಚ್ಚಾಗುವ ಮೂಲಕ ಇದರ ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯ ಎಚ್.ಜಿ.ಗೋಪಾಲಗೌಡ ಅವರ ತೋಟದಲ್ಲಿ ಬುಧವಾರ ರೈತಕೂಟಗಳ ಒಕ್ಕೂಟ ಹಾಗೂ ಸಿರಿ ಸಮೃದ್ಧಿ ರೈತರ ಕೂಟ ಆಯೋಜಿಸಿದ್ದ “ಸಂದಿಸಿ – ಸ್ಪಂದಿಸಿ” ಎಂಬ ರೈತರಿಗೆ ರೇಷ್ಮೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೊಟ್ಟೆಯಿಂದ ಬಟ್ಟೆಯವರೆಗೆ ಸಾಗುವ ರೇಷ್ಮೆ ಉದ್ಯಮ ರಾಜ್ಯಕ್ಕೆ ರೇಷ್ಮೆ ನಾಡು ಎಂಬ ಹೆಸರನ್ನು ತಂದುಕೊಟ್ಟಿದೆ. ಶಿಡ್ಳಘಟ್ಟ ಭಾಗದ ರೇಷ್ಮೆಗೆ ವಿಶ್ವದಾದ್ಯಂತ ಬೇಡಿಕೆಯಿದೆ. ಈ ಉದ್ಯಮವನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯಲು ರೈತರು ಮನಸ್ಸು ಮಾಡಬೇಕು. ಸೂಕ್ಷ್ಮ ಬೆಳೆಯಾದ ರೇಷ್ಮೆಯ ಸುತ್ತ ಇತರ ಬೆಳೆಗಳನ್ನು ಬೆಳೆಯದಂತೆ ರೈತರಲ್ಲಿಯೇ ಈ ಬೆಳೆಯ ಬಗ್ಗೆ ಒಲವು ಮೂಡಬೇಕಿದೆ. ಆತ್ಮವಿಶ್ವಾಸವನ್ನು ರೈತರು ಕಳೆದುಕೊಳ್ಳದೇ ತಮ್ಮ ಆರೋಗ್ಯದ ಭಾಗ್ಯದ ಗುಟ್ಟನ್ನು ಮುಂದಿನ ಪೀಳಿಗೆಗೂ ತಿಳಿಸಬೇಕು. ಆಗ ರೈತರ ಬಾಳು ಸಬಲ ಮತ್ತು ಸಂಪನ್ನವಾಗಲಿದೆ ಎಂದರು.
ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತ ಹಾಗೂ ರೇಷ್ಮೆ ನಿರ್ದೇಶಕ ಎಂ.ಬಿ.ರಾಜೇಶ್ ಗೌಡ ಮಾತನಾಡಿ, ರಾಜ್ಯದಲ್ಲಿ ಆಧುನಿಕ ರೇಷ್ಮೆ ನೂಲು ಬಿಚ್ಚಾಣಿಕೆಯ ಎ.ಆರ್.ಎಂ ಯಂತ್ರೋಪಕರಣಗಳ ಸ್ಥಾಪನೆ ಹೆಚ್ಚಾಗುತ್ತಿದೆ. ಹಾಗಾಗಿ ರೇಷ್ಮೆ ಗೂಡಿಗೆ ಬೇಡಿಕೆ ಕುದುರುವುದು ಸಹಜ. ರೇಷ್ಮೆ ಗೂಡಿನ ಬೆಲೆ ದುಪ್ಪಟ್ಟು ಅಥವಾ ಮೂರು ಪಟ್ಟು ಆಗುತ್ತದೆ. ರೇಷ್ಮೆ ಬೆಳೆಗಾರರು ಈ ಸುವರ್ಣ ಕಾಲಕ್ಕೆ ಸಜ್ಜಾಗಿ ಎಂದರು.
ರೇಷ್ಮೆ ಇಲಾಖೆಯ ವತಿಯಿಂದ 60 ಕೋಟಿ ರೂಗಳ ಯಂತ್ರೋಪಕರಣಗಳನ್ನು ಇನ್ನೆರಡು ದಿನಗಳಲ್ಲಿ ರೈತರಿಗೆ ರಾಜ್ಯದಾದ್ಯಂತ ನೀಡಲಾಗುತ್ತದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ 13 ಮಂದಿ ರೇಷ್ಮೆ ವಿಸ್ತರಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಪ್ರಗತಿಪರ ರೈತ ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ ಮಾತನಾಡಿ, ಸೊಪ್ಪು ಕಟಾವು ಮಾಡುವ ಯಂತ್ರ ಮತ್ತು ಕಡ್ಡಿ ಪುಡಿ ಮಾಡುವ ಯಂತ್ರವನ್ನು ರೈತರಿಗೆ ಇಲಾಖೆಯಿಂದ ಒದಗಿಸಿ. ಉಚಿತವಾಗಿ ನೀಡುವ ಅಗತ್ಯವಿಲ್ಲ, ರೈತರಿಂದ ಹಣ ಪಡೆದೇ ನೀಡಿ ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೇರಿದಂತೆ ಅಧಿಕಾರಿಗಳು ರೇಷ್ಮೆ ಗೂಡು ಕಟ್ಟುವ ವಿವಿಧ ಹಂತಗಳು ಹಾಗೂ ಹಿಪ್ಪುನೇರಳೆ ತೋಟವನ್ನು ವೀಕ್ಷಿಸಿದರು. ಬೋದಗೂರು ಗ್ರಾಮದ ವೌಲ್ಯವರ್ಧಿತ ಆಹಾರ ಉತ್ಪನ್ನಗಳ ಮಹಿಳಾ ರೈತರ ಆಸಕ್ತ ಗುಂಪು ತಯಾರಿಸಿದ್ದ ಸಿರಿಧಾನ್ಯಗಳ ತಿನಿಸುಗಳನ್ನು ಆಸ್ವಾದಿಸಿದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಸಿರಿ ಸಮೃದ್ಧಿ ರೈತ ಕೂಟದ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ಭಾರತಾಂಬೆ ರೈತ ಕೂಟದ ಅಧ್ಯಕ್ಷೆ ಕಾಚಹಳ್ಳಿ ಎಂ.ರತ್ನಮ್ಮ, ಕಾರ್ಯದರ್ಶಿ ವನಿತಾ, ಸ್ವಾಮಿ ವಿವೇಕಾನಂದ ರೈತಕೂಟದ ಅಧ್ಯಕ್ಷ ಬಿ.ರಾಮಾಂಜಿ, ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಕೆ.ಎನ್.ರವಿ, ರೇಷ್ಮೆ ಇಲಾಖೆಯ ಅಧಿಕಾರಿಗಳು, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಹಾಜರಿದ್ದರು.