Sidlaghatta : ಶಿಡ್ಲಘಟ್ಟ ನಗರದ ಹೊರವಲಯದ ಹನುಮಂತಪುರದ ಬಳಿ 185 ಕೋಟಿ ವೆಚ್ಚದಲ್ಲಿ ಮುಂದಿನ ವರ್ಷದ ವೇಳೆಗೆ ಹೈಟೆಕ್ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ನಿರ್ಮಿಸುವ ಉದ್ದೇಶವಿದ್ದು, ಆ ಸಂಬಂಧ ಸ್ಥಳ ಗುರುತಿಸಲಾಗಿದೆ, ಸದ್ಯದಲ್ಲೆ ಕಾಮಗಾರಿ ಆರಂಭವಾಗಲಿದೆ ಎಂದು ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ನಗರದ ಹೊರವಲಯದ ಹನುಮಂತಪುರ ಗ್ರಾಮದ ಸರ್ವೇ ನಂ 19ರ ಸರ್ಕಾರಿ ಜಮೀನಿಗೆ ಗುರುವಾರ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಅವರು ಮಾತನಾಡಿದರು.
ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಿಸುವುದು ಈ ಭಾಗದ ರೈತರ ಬಹುದಿನದ ಬೇಡಿಕೆ ಆಗಿತ್ತು. ಇದನ್ನು ಮನಗಂಡ ಸರ್ಕಾರ 2023-24 ಸಾಲಿನ ಆಯವ್ಯಯದಲ್ಲಿ ಶಿಡ್ಲಘಟ್ಟ ನಗರದಲ್ಲಿ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಿಸಲು 80 ಕೋಟಿ ಅನುದಾನವನ್ನು ಮೀಸಲಿಟ್ಟಿತ್ತು.ಈ ಯೋಜನೆಗೆ ಒಟ್ಟು 185 ಅನುದಾನದ ಅವಶ್ಯಕತೆ ಇದ್ದು, ಪ್ರಸ್ತುತ ಮೊದಲನೇ ಹಂತದಲ್ಲಿ 80 ಕೋಟಿ ಅನುದಾನದಲ್ಲಿ ಕೆಲಸ ಆರಂಭ ಆಗಲಿದೆ. ಮುಂದಿನ ವರ್ಷದಲ್ಲಿ ಉಳಿಕೆ ಅನುದಾನವನ್ನು ಒದಗಿಸಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಸದ್ಯದಲ್ಲೇ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಹೇಳಿದರು.
ಪ್ರಸ್ತುತ ಹನುಮಂತಪುರ ಗ್ರಾಮದ ಬಳಿ ಗುರುತಿಸಿರುವ ಜಾಗ 15 ಎಕರೆ ವಿಸ್ತೀರ್ಣವನ್ನು ಹೊಂದಿದ್ದು, ನಗರಕ್ಕೆ ಸಮೀಪ ಇರುವುದರಿಂದ ರೇಷ್ಮೆ ಗೂಡನ್ನು ರೈತರು ಮಾರುಕಟ್ಟೆಗೆ ತರಲು ಅನುಕೂಲ ಆಗುತ್ತದೆ. ರೇಷ್ಮೆ ವಹಿವಾಟಿಗೂ ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಆನ್ ಲೈನ್ ವ್ಯವಸ್ಥೆ ಮೂಲಕ ವಹಿವಾಟು ನಡೆಯುವುದರಿಂದ ಅದಕ್ಕೆ ಪೂರಕವಾಗಿ ಮಾರುಕಟ್ಟೆಯನ್ನು ರೈತರಿಗೆ ಮತ್ತು ವ್ಯಾಪರಸ್ಥರಿಗೆ ಅನುಕೂಲ ಆಗುವ ರೀತಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ. ಸಿ ಸುಧಾಕರ್ ಮಾತನಾಡಿ, ನಗರಕ್ಕೆ ಸಮೀಪದಲ್ಲಿಯೇ ಸೂಕ್ತ ಸ್ಥಳವನ್ನು ರೇಷ್ಮೆಗೂಡಿನ ಮಾರುಕಟ್ಟೆಗೆ ಗುರುತಿಸಬೇಕೆಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಕಳೆದೆರಡು ತಿಂಗಳಿನಿಂದ ಶಾಸಕ ಬಿ.ಎನ್.ರವಿಕುಮಾರ್ ಅವರು ಈ ಬಗ್ಗೆ ನಿರಂತರ ಸಂಪರ್ಕದಲ್ಲಿದ್ದರು. ಸಚಿವರ ಮೂಲಕ ಅಧಿಕಾರಿಗಳಿಗೆ ಒತ್ತಡವನ್ನು ಹೇರಿದೆವು. ನೂತನ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಿಸಲು ಸಹಕಾರ ನೀಡಿದ ರೈತರಿಗೆ ಪರ್ಯಾಯ ಭೂಮಿ ಹಾಗೂ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತದೆ ಎಂದರು.
ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ತಹಶೀಲ್ದಾರ್ ಹೆಚ್ಚು ಮುತುವರ್ಜಿವಹಿಸಿ ಸೂಕ್ತ ಜಾಗವನ್ನು ಗುರುತಿಸಿದ್ದಾರೆ. ಈ ಕಾರ್ಯಕ್ಕೆ ಸಹಕಾರ ನೀಡಿದ ಎಲ್ಲ ರೈತರಿಗೆ ಧನ್ಯವಾದಗಳು. ಈ ಮಾರುಕಟ್ಟೆಯ ನಿರ್ಮಾಣದಿಂದ ಸಾವಿರಾರು ಕುಟುಂಬಗಳ ಬದುಕಿಗೆ ಸಹಾಯಕವಾಗಲಿದೆ ಎಂದು ಹೇಳಿದರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಶಿಡ್ಲಘಟ್ಟ ತಾಲೂಕಿನಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ನಿರ್ಮಿಸಲು ಮುಂದಾಗಿರುವ ಸರ್ಕಾರಕ್ಕೆ ಹಾಗೂ ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯಪ್ರವೃತ್ತರಾಗಿರುವ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಕ್ಷೇತ್ರದ ಎಲ್ಲಾ ರೈತರು ಮತ್ತು ರೀಲರುಗಳು ಹಾಗೂ ರೇಷ್ಮೆಯನ್ನು ನಂಬಿ ಬದುಕುತ್ತಿರುವವರೆಲ್ಲಾ ಆಭಾರಿಗಳಾಗಿರುತ್ತಾರೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ತಹಶೀಲ್ದಾರ್ ಬಿ.ಎನ್.ಸ್ವಾಮಿ, ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.