ಶಿಡ್ಲಘಟ್ಟ ನಗರದ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಭಾನುವಾರ ವಾಹನ ಚಾಲಕ ಹಾಗೂ ವಾಹನ ಮಾಲೀಕರ ಸಂಘಟನೆಯ ಸದಸ್ಯರು ಹಿಂದೂ ಮುಸ್ಲೀಮರೆಲ್ಲರೂ ಒಗ್ಗೂಡಿ ಶ್ರೀರಾಮನವಮಿ ಹಬ್ಬವನ್ನು ಆಚರಿಸಿದರು. ಪೆಂಡಾಲ್ ಹಾಕಿ ಶ್ರೀರಾಮನ ಭಾವಚಿತ್ರಕ್ಕೆ ಎಲ್ಲರೂ ಪೂಜೆ ಸಲ್ಲಿಸಿ, ಕೋಮು ಸೌಹಾರ್ದಕ್ಕೆ ನಾಂದಿ ಹಾಡಿ, ವಾಹನ ಚಾಲಕ ಹಾಗೂ ವಾಹನ ಮಾಲೀಕರ ಸಂಘಟನೆಯ ಸದಸ್ಯರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಅವರೆಲ್ಲರೂ ಸಾರ್ವಜನಿಕರಿಗೆ ಪಾನಕ ಹೆಸರುಬೆಳೆ ಕೋಸಂಬರಿಯನ್ನು ವಿತರಿಸಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದ ಮಾರಮ್ಮ ದೇವಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಶ್ರೀರಾಮನವಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಿ, ಪ್ರಸಾದ ವಿನಿಯೋಗಿಸಲಾಯಿತು. ಮಾರಮ್ಮ ದೇವಿ ಭಜನೆ ಮಂಡಳಿಯಿಂದ ಭಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಾರ್ಮೇನಿಯಂ ನಾರಾಯಣಪ್ಪ ಹಾಗೂ ತಬಲ ಆಶ್ವತಪ್ಪ ಅವರನ್ನು ಸನ್ಮಾನಿಸಲಾಯಿತು.
ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡಸಂದ್ರ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮನವಮಿ ಹಬ್ಬದ ಪ್ರಯುಕ್ತ ರಾಮಕೋಟಿ ರಾಮ ಸಪ್ತಾಹವನ್ನು ಏರ್ಪಡಿಸಲಾಗಿತ್ತು. ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಅಖಂಡ ರಾಮ ಭಜನೆಯಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು. ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಹೆಸರು ಬೇಳೆ, ಪಾನಕ ಮತ್ತು ಪ್ರಸಾದ ವಿತರಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ಬಳಿಯ ಬಯಲಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿಯ ಪ್ರಯುಕ್ತ ದೇವರಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು. ಶ್ರೀರಾಮನವಮಿಯ ಪ್ರಯುಕ್ತ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು. ವಿವಿಧ ರೀತಿಯ ಅಂಗಡಿ ಮುಂಗಟ್ಟುಗಳು, ತಿನಿಸುಗಳ ಮಾರಾಟ, ಆಟಿಕೆಗಳು, ಅಚ್ಚೆ ಹಾಕುವವರು ಕಂಡುಬಂದರು. ಭಕ್ತರಿಗೆಲ್ಲಾ ಮಜ್ಜಿಗೆ, ಹೆಸರುಬೇಳೆ ವಿತರಿಸಲಾಯಿತು.
ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಶ್ರೀರಾಮನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶ್ರೀರಾಮ, ಆಂಜನೇಯ ದೇವಾಲಯಗಳು ಸೇರಿದಂತೆ ಎಲ್ಲಾ ದೇಗುಲಗಳಲ್ಲೂ ವಿಶೇಷ ಪೂಜೆ, ಪ್ರಸಾದ ವಿತರಣೆ ಆಯೋಜಿಸಲಾಗಿತ್ತು.