Sidlaghatta : ಹೆಪಾಟೈಟಿಸ್ ವೈರಸ್‌ಗಳು ಹೆಚ್ಚು ಅಪಾಯಕರವಾಗಿದ್ದು ಲಿವರ್‌ಗೆ ಸಂಬಂಧಿಸಿದಂತೆ ಸಿರೋಸಿಸ್ ಮತ್ತು ಲಿವರ್ ಕ್ಯಾನ್ಸರ್ ತಂದೊಡ್ಡುತ್ತವೆ. ಅದರಲ್ಲಿಯೂ ನವಜಾತ ಶಿಶುವಿಗೆ ಮುಖ್ಯವಾಗಿ ಹೆಪಾಟೈಟಿಸ್‘ಬಿ’ ವಿರುದ್ದ ಹೋರಾಡುವ ಲಸಿಕೆ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ವಿಶ್ವ ಹೆಪಟೈಟಿಸ್ ದಿನದ ಅಂಗವಾಗಿ ಅರಿವು ಮೂಡಿಸುವ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯಕೃತ್ತಿನಲ್ಲಿ (ಲಿವರ್) ಉರಿಯೂತವನ್ನುಂಟು ಮಾಡುವ ಲಕ್ಷಣಗಳು ಅಥವಾ ರೋಗಗಳಿಗೆ ಹೆಪಟೈಟಿಸ್ ಎಂದು ಹೇಳಲಾಗುತ್ತದೆ. ಈ ಉರಿಯೂತ ಸತತ ಮದ್ಯಪಾನ ಸೇವನೆಯಿಂದ ಅಥವಾ ವೈರಸ್‌ಗಳಿಂದ ಹೆಪಟೈಟಿಸ್ ಅನ್ನು ಹೆಪಟೈಟಿಸ್ ಎ,ಬಿ, ಸಿ ಮತ್ತು ಡೆಲ್ಟಾ ಫ್ಯಾಕ್ಟರ್ ಎಂದು ಗುರುತಿಸಲಾಗುವ ವೈರಸ್‌ಗಳಿಂದ ಹರಡಬಹುದು.
ಜುಲೈ 28 ಹೆಪಟೈಟಿಸ್ ವೈರಸ್ ಕಂಡು ಹಿಡಿದ ಮತ್ತು ಹೆಪಟೈಟಿಸ್ ರೋಗಕ್ಕೆ ಲಸಿಕೆ ಕಂಡುಹಿಡಿದ ನೊಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ಬರೂಚ ಸಾಮ್ಯುಯಲ್ ಬ್ಲೂಮ್‌ಬರ್ಗ್ ಅವರ ಜನ್ಮದಿನವಾಗಿದೆ. ಅವರ ಗೌರವಾರ್ಥ ಜುಲೈ 28 ಅನ್ನು ವಿಶ್ವ ಹೆಪಟೈಟಿಸ್ ದಿನವಾಗಿ ಆಚರಿಸಲಾಗುತ್ತದೆ.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಈ ವರ್ಷ ವಿಶ್ವ ಹೆಪಟೈಟಿಸ್ ದಿನದ ಘೋಷ ವಾಕ್ಯ “ಒಂದು ಜೀವ ಒಂದು ಲಿವರ್” ಎಂಬುದಾಗಿದೆ. ವೈರಸ್‌ಗಳು ಹಲವು ವರ್ಷಗಳ ವರೆಗೆ ರೋಗದ ಯಾವುದೇ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ. ರೋಗದ ಬಗ್ಗೆ ತಿಳಿವಳಿಕೆ ಇಲ್ಲದಿರುವುದು. ಅಜ್ಞಾನದಿಂದ ಹೆಪಟೈಟಿಸ್ ರೋಗ ಉಲ್ಬಣಾವಸ್ಥೆ ತಲುಪಿದ ನಂತರವೇ ಪತ್ತೆಯಾಗುತ್ತದೆ. ಆದ್ದರಿಂದ ಮುಂಚಿತವಾಗಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಮನೋಹರ್, ಎಂ.ವಿ.ಜೆ ವೈದ್ಯಕೀಯ ಅಧೀಕ್ಷಕ ಡಾ.ಪ್ರಮೋದ್, ಆರೋಗ್ಯ ನಿರೀಕ್ಷಕರಾದ ದೇವರಾಜ್, ಲೋಕೇಶ್, ಮುಖಂಡರಾದ ತಾದೂರು ರಘು, ರಮೇಶ್ ಹಾಜರಿದ್ದರು.