Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರ ಸಮೀಪ ಕಡದಾನ ಕುಂಟೆ ಬಳಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಮೀಸಲಿಟ್ಟಿರುವ ಜಾಗವನ್ನು ಒತ್ತುವರಿ ಮಾಡಿ ನೀಲಗಿರಿ ಮರಗಳನ್ನು ದಾಸ್ತಾನು ಮಾಡಿದ್ದರೂ ಕ್ರೀಡಾ ಇಲಾಖೆ ಅಧಿಕಾರಿಗಳು ಏನೂ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಅಥ್ಲೆಟಿಕ್ ಪಟು ಜಯಂತಿಗ್ರಾಮ ನಾರಾಯಣಸ್ವಾಮಿ ದೂರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಸರ್ವೆ ನಂಬರ್ 10ರಲ್ಲಿ 31 ಗುಂಟೆ ಜಮೀನನ್ನು ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕಾಗಿ ಮೀಸಲಿಡಲಾಗಿದೆ. ವರ್ಷಗಳೆ ಕಳೆದರೂ ಅಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಿಲ್ಲ. ಅನುದಾನ ಇನ್ನೂ ಬಿಡುಗಡೆ ಆಗಿಲ್ಲ ಎಂದರು.
ಇದೀಗ ಆ ಜಾಗದಲ್ಲಿ ನೆರೆ ಹೊರೆಯ ಕೆಲವರು ನೀಲ ಗಿರಿ ಮರಗಳನ್ನು ದಾಸ್ತಾನಿನ ಮಂಡಿ ಮಾಡಿದ್ದಾರೆ. ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾ ಯುವ ಜನ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಒತ್ತುವರಿಯಾದ ಜಾಗದ ಫೋಟೋ ಸಮೇತ ವಿಷಯ ತಿಳಿಸಲಾಗಿತ್ತು.
ಒಂದೂವರೆ ತಿಂಗಳ ಹಿಂದೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯಿತ್ರಿ ಅವರು ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ಮಾಡಿ ಹೊರಟರು. ನಂತರ ಯಾವುದೆ ಕ್ರಮ ಇದುವರೆಗೂ ಜರುಗಿಸಿಲ್ಲ ಎಂದು ದೂರಿದರು.
ತೆಗೆದುಕೊಂಡ ಕ್ರಮದ ಬಗ್ಗೆ ಕೇಳಿದರೆ ಏನೊಂದು ವಿಷಯವನ್ನು ಸ್ಪಷ್ಟಪಡಿಸುತ್ತಿಲ್ಲ. ಈ ಮದ್ಯೆ ಇನ್ನಷ್ಟು ಒತ್ತುವರಿ ಮುಂದುವರೆದಿದೆ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಒತ್ತುವರಿ ತೆರವು ಮಾಡಲು ಕ್ರಮ ಕೈಗೊಂಡು ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಮೀಸಲಾದ ಜಾಗವನ್ನು ಉಳಿಸಿಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.